KSRTC: ಒಂದೇ ಆಧಾರ್‌ನ 3ಜೆರಾಕ್ಸ್ ಪ್ರತಿ ಹಿಡಿದು ಟಿಕೆಟ್ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ್ಕಾರಿ ನೌಕರಳೇ ಎಂದು ಅವಾಜ್!!!
ಬೆಂಗಳೂರು: ಅಕ್ಷರ ತಿಳಿಯದ ಮಂದಿ ಬಂದು ತಪ್ಪು ಮಾಡಿದರೆ ಮಾನವೀಯ ನೆಲೆಗಟ್ಟಿನಲ್ಲಿ ಕ್ಷಮಿಸಬಹುದೇನೋ. ಆದರೆ ಒಂದು ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಒಂದೇ ಆಧಾರ್ ಕಾರ್ಡ್‌ನ ಮೂರು ಜೆರಾಕ್ಸ್ ಕಾಪಿ ತಂದು ನಿರ್ವಾಹಕರಿಗೆ ಮೂರು ಉಚಿತ ಟಿಕೆಟ್ ಕೊಡುವಂತೆ ತೋರಿಸಿದ್ದು ಅಲ್ಲದೆ ಆ ಕಂಡಕ್ಟರ್‌ಗೆ ಅವಾಜ್ ಕೂಡ ಹಾಕಿದ್ದಾರೆ.
ಹೌದು! ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾವು ಕೊಟ್ಟ ಭರವಸೆಯಂತೆ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೊಟ್ಟಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದಕ್ಕಿಂತ ದುರುಪಯೋಗ ಪಡಿಸಿಕೊಳ್ಳುವುದೇ ಬಹುತೇಕ ಹೆಚ್ಚಾಗಿ ಕಾಣುತ್ತಿದೆ.
ಮಹಿಳೆಯರು ಈ ಶಕ್ತಿಯೋಜನೆಯನ್ನು ದುರುಪಯೋಗ ಮಾಡಿಕೊಂಡರೆ ಅದನ್ನು ಬಸ್‌ನ ನಿರ್ವಾಹಕರ ತಲೆಗೆ ಕಟ್ಟಿ ಸಂಸ್ಥೆಯ ಅಧಿಕಾರಿಗಳು ಅಮಾನತು ಮಾಡುವುದು ಇದೆ. ಅಲ್ಲದೆ ಈಗಾಗಲೇ ಮಹಿಳೆಯರು ಮಾಡಿದ ತಪ್ಪಿಗೆ ನೂರಾರು ನಿರ್ವಾಹಕರು ಅಮಾನತ್ತಾಗಿ ಮನೆಯಲ್ಲಿ ಕುಳಿತಿರುವ ನಿದರ್ಶನಗಳು ನಮ್ಮ ಕಣ್ಣಮುಂದೆ ಇವೆ.
ಈ ನಡುವೆ ಮೊನ್ನೆ ಸರ್ಕಾರಿ ಬಸ್ ಹತ್ತಿದ ಮೂವರು ಮಹಿಳೆಯರು ಒಂದೇ ಆಧಾರ್ ಕಾರ್ಡ್‌ನ ಮೂರು ಜೆರಾಕ್ಸ್ ಪ್ರತಿಯನ್ನು ತೋರಿಸಿ ನಿರ್ವಾಹಕರಿಗೆ ಉಚಿತ ಟಿಕೆಟ್ ಕೊಡಬೇಕು ಎಂದು ಕೇಳಿದ್ದಾರೆ. ಈ ವೇಳೆ ನಿರ್ವಾಹಕರು ಆಧಾರ್ ಕಾರ್ಡ್ ಪರಿಶೀಲನೆ ಮಾಡಿದ್ದಾರೆ. ಆಗ ಒಂದೇ ಆಧಾರ್‌ನ ಮೂರು ಜೆರಾಕ್ಸ್ ಪ್ರತಿ ತೋರಿಸಿರುವುದು ಗೊತ್ತಾಗಿದೆ.
ಈ ವೇಳೆ ನಿರ್ವಾಹಕರು ಪ್ರಶ್ನಿಸಿ ಒಂದೇ ಆಧಾರ್ ಕಾರ್ಡ್‌ನ ಮೂರು ಜೆರಾಕ್ಸ್ ತೋರಿಸುತ್ತಿದ್ದೀರಲ್ಲ ಎಂದಿದ್ದಾರೆ. ಅಷ್ಟಕ್ಕೆ ತಾವೇನು ತಪ್ಪೆ ಮಾಡಿಲ್ಲ ಎಂಬಂತೆ ಒಬ್ಬಾಕೆ ನಿರ್ವಾಹಕರ ಜತೆ ಜಗಳ ಮಾಡಲು ಮುಂದಾಗಿದ್ದಾಳೆ. ಇನ್ನು ಆಕೆ ನಾನು ಸರ್ಕಾರಿ ಕೆಲಸದಲ್ಲಿ ಇದ್ದೇನೆ ಎಂದು ಹೇಳಿ ಬಾಯಿ ಜೋರು ಮಾಡಿದ್ದಾಳೆ.
ಅಲ್ಲದೆ ಒಂದೇ ಆಧಾರ್‌ನ ಮೂರು ಜೆರಾಕ್ಸ್ ಪ್ರತಿಯೆಂದು ನಿಮಗೆ ಗೊತ್ತಾದ ಮೇಲೆ ನಾವು ಹಣಕೊಟ್ಟು ಟಿಕೆಟ್ ಪಡೆಯುತ್ತೇವೆ. ಅದಕ್ಕೇಕೆ ನೀವು ಈ ರೀತಿ ಕೇಳಬೇಕು ಎಂದು ನಿರ್ವಾಹಕರಿಗೆ ಧಮ್ಕಿ ಹಾಕಿದ್ದಾಳೆ. ಜತೆಗೆ ಸಹ ಪ್ರಯಾಣಿಕರ ಬಾಯಿ ಮುಚ್ಚಿಸುವುದಕ್ಕೆ ಮುಂದಾಗಿದ್ದಾಳೆ.
ಈ ಮಹಿಳೆಯರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಲ್ಲದೆ ನಿರ್ವಾಹಕರಿಗೆ ಅವಾಜ್ ಹಾಕಿದ್ದು, ನಾವು ಹಣ ಕೊಟ್ಟು ಟಿಕೆಟ್ ಪಡೆಯುತ್ತೇವೆ ಬಾಯಿ ಮುಚ್ಚಿಕೊಂಡು ಹೋಗು ಎಂದು ನಿರ್ವಾಹಕರಿಗೆ ಏಕ ವಚನ ಪ್ರಯೋಗ ಮಾಡಿದ್ದಾಳೆ. ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆ ಆಗುವುದಿಲ್ಲವೆ ಈ ಮಹಿಳೆಯರಿಗೆ?
ಒಂದು ವೇಳೆ ಮೂರು ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸದೆ ನಿರ್ವಾಹಕರು ಉಚಿತ ಟಿಕೆಟ್ ಕೊಟ್ಟಿದ್ದು ಅದೇ ಸಮಯಕ್ಕೆ ಚೆಕಿಂಗ್‌ಗೆ ತನಿಖಾ ಸಿಬ್ಬಂದಿ ಬಂದು ನೋಡಿದರೆ ಆಗ ನಿರ್ವಾಹಕರ ಕೆಲಸಕ್ಕೆ ಕುತ್ತು ಬರುತ್ತಿತ್ತಲ್ಲವೇ. ಹೀಗಾಗಿ ತಪ್ಪುಮಾಡಿರುವ ಮಹಿಳೆಯರಿಗೂ ಕಾನೂನು ರೀತಿ ಶಿಕ್ಷೆ ಆಗಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಅಲ್ಲದೆ ನಿರ್ವಾಹಕರು ಬಸ್ಸನ್ನು ಪೊಲೀಸ್ ಠಾಣೆಗೆ ತೆಗದುಕೊಂಡು ಹೋಗುತ್ತೇವೆ ಅಲ್ಲೇ ಉತ್ತರಕೊಡಿ ಎಂದು ಹೇಳಿದರೆ ನಾವೇನು ತಪ್ಪೇ ಮಾಡಿಲ್ಲ ಎಂಬಂತೆ ನಿರ್ವಾಹಕರ ಜತೆ ಜಗಳಕ್ಕೆ ನಿಂತು ಅವರ ಬಾಯಿಯನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಅಂದರೆ ಇಲ್ಲಿ ತಪ್ಪು ಮಾಡುವ ಪ್ರಯಾಣಿಕರಿಗೆ ಯಾವುದೇ ಶಿಕ್ಷೆ ಆಗದಿರುವುದಕ್ಕೆ ಈ ರೀತಿ ಬೇಕಾಬಿಟ್ಟಿಯಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ.
ಅಂಥವರಿಗೆ ಶಿಕ್ಷೆ ಆದರೆ ಮುಂದೆ ನಿರ್ವಾಹಕರ ವಿರುದ್ಧ ಮಾತನಾಡದೆ ಅವರು ಸಾರ್ವಜನಿಕರ ಕೆಲಸ ಮಾಡುತ್ತಿರುವವರು ಎಂಬ ಅರಿವು ಮೂಡುತ್ತದೆ. ಆದರೆ ಸಾರಿಗೆ ನಿಗಮಗಳ ಎಂಡಿಗಳು ಮತ್ತು ಆಡಳಿತ ಮಂಡಳಿ ಈ ಬಗ್ಗೆ ಯಾವುದೆ ಕಾನೂನು ಕ್ರಮ ಜರುಗಿಸುವುದಿಲ್ಲ. ಬದಲಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಶಿಕ್ಷೆಗೊಳಪಡಿಸುವುದಕ್ಕೆ ಕ್ಷಣವು ಯೋಚನೆ ಮಾಡುವುದಿಲ್ಲ. ಹೀಗಾಗಿ ಇಂಥವರಿಗೆ ಕೋಡುಗಳು ಬಂದಿವೆ. ಇನ್ನಾದರೂ ಈ ಬಗ್ಗೆ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ತಪ್ಪು ಮಾಡಿದವರನ್ನು ಕಾನೂನು ರೀತಿ ಶಿಕ್ಷೆಗೆ ಒಳಪಡಿಸಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಕಳಕಳಿ.