KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್ ಚಾಲಕನ ಸ್ಥಿತಿ ಚಿಂತಾಜನಕ
ರಾಣಿಪೇಟೆ: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾದಲ್ಲಿ ಲಾರಿ ಚಾಲಕ ಸೇರಿ ಲಾರಿಯಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಬಸ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಬಸ್‌ನಲ್ಲಿದ್ದ 20 ಜನರಿಗೆ ದವಡೆಗಳು ಮುರಿದಿರುವ ಘಟನೆ ತಮಿಳುನಾಡಿನ ರಾಣಿಪೇಟೆಯ ಚಿತ್ತೂರು ರಸ್ತೆಯಲ್ಲಿ ಇಂದು ತಟರಾತ್ರಿ ನಡೆದಿದೆ.
KSRTC ಕೋಲಾರ ವಿಭಾಗದ ಮುಳಬಾಗಿಲು ಡಿಪೋ ಬಸ್- ಹಾಗೂ ಶ್ರೀನಿವಾಸಪುರಕ್ಕೆ ಸೇರಿದ ಲಾರಿ ನಡುವೆ ಗುರುವಾರ ಮುಂಜಾನೆ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಚಾಲಕ ಬಾಬು ತೀವ್ರಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇನ್ನು ಲಾರಿ ಚಾಲಕ ಸೇರಿ ಲಾರಿಯಲ್ಲಿದ್ದ ನಾಲ್ಕುಮಂದಿ ಅಸುನೀಗಿದ್ದು, ಲಾರಿಯಲ್ಲಿದ್ದವರ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ. ಬಸ್- ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ ಬಸ್ ಚಾಲಕ ಬಾಬುಗೆ ತಲೆ, ಕಾಲು ಕೈ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟಾಗಿದೆ ಎಂದು ಆಸ್ಪತ್ರೆಯಲ್ಲಿರುವ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 54 ಮಂದಿಯಲ್ಲಿ ಸುಮಾರು 20 ಜನರಿಗೆ ಹಲ್ಲು ಮುರಿದ್ದಿದ್ದರೆ ಉಳಿದವರು ಸಣ್ಣಪುಟ್ಟ ಗಾಯಗೊಂಡು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 20 ಜನರನ್ನು ಸಿಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಬಸ್ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ವೇಲೂರು ತಾಲೂಕಿನ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲದೆ ಉಳಿದವರಿಗೆ ಒಂದು ಭವನವನ್ನು ಬುಕ್ ಮಾಡಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ನಿರಂತರ ಡ್ಯೂಟಿಯೇ ಅಪಘಾತಕ್ಕೆ ಕಾರಣ: ಮುಳಬಾಗಿಲು ಡಿಪೋದಲ್ಲಿ ರಜೆ ನೀಡದೆ ನಿರಂತರವಾಗಿ ಡ್ಯೂಟಿಗೆ ಹತ್ತಿಸುತ್ತಿರುವುದರಿಂದ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎಂದು ಡಿಪೋ ಚಾಲನಾ ಸಿಬ್ಬಂದಿಗಳು ಆರೋಪ ಮಾಡಿದ್ದಾರೆ. ಜ.7ರಂದು ಓಂ ಶಕ್ತಿಗೆ ಹೋಗಲು 54 ಮಂದಿ ಬಸ್ ಬುಕ್ ಮಾಡಿಕೊಂಡಿದ್ದಾರೆ. ಈ ವೇಳೆ ಆಗತಾನೆ ಡ್ಯೂಟಿ ಮುಗಿಸಿ ಬಂದಿದ್ದ ಚಾಲಕ ಬಾಬು ಅವರನ್ನು ಮತ್ತೆ ಡ್ಯೂಟಿಗೆ ಹತ್ತಿಸಿದ್ದಾರೆ.
ಹೀಗೆ ನಿರಂತವಾಗಿ ಬಾಬು ಅವರು 9 ದಿನಗಳಿಂದ ವಿಶ್ರಾಂತಿ ರಹಿತವಾಗಿ ಡ್ಯೂಟಿ ಮಾಡುತ್ತಿದ್ದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿದ್ದರು, ಈ ನಡುವೆ ನನಗೆ ವಿಶ್ರಾಂತಿ ಬೇಕು ಡ್ಯೂಟಿ ಮಾಡಲು ಆಗುತ್ತಿಲ್ಲ ಎಂದು ಹೇಳಿದರೂ ಡಿಪೋ ವ್ಯವಸ್ಥಾಪಕರು ಇಲ್ಲ ಇದೊಂದು ದಿನ ಮಾಡಿಕೊಂಡು ಬಾ ಎಂದು ಡ್ಯೂಟಿ ಹತ್ತಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ರೀತಿ ನಿರಂತರವಾಗಿ ಡ್ಯೂಟಿಗೆ ಹತ್ತಿಸುತ್ತಿರುವುದು ಜತೆಗೆ ಯಾವುದೇ ಒಟಿ ಕೊಡದೆ ನೌಕರರನ್ನು ನಿತ್ಯ ಕಾಡುತ್ತಿದ್ದಾರೆ ಡಿಪೋ ವ್ಯವಸ್ಥಾಪಕ ಎಂದು ಸಿಬ್ಬಂದಿಗಳು ಆರೋಪ ಮಾಡಿದ್ದಾರೆ. ಅಲ್ಲದೆ ಈ ಅಪಘಾತದಕ್ಕೆ ಮುಳಬಾಗಿಲು ಡಿಎಂ ಅವರೆ ಕಾರಣ ಎಂದು ಕಿಡಿಕಾರುತ್ತಿದ್ದಾರೆ.