KSRTC ಕುಣಿಗಲ್: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ
![](https://vijayapatha.in/wp-content/uploads/2024/12/13-Dec-2024-ksrtc-narayana.jpg)
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರೊಬ್ಬರ ಮೇಲೆ ಲಾ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರೂ ಸಹ ಅವರನ್ನು ಬಂಧಿಸದಿರುವುದಕ್ಕೆ ಅಸಮಾಧಾನಗೊಂಡ ಹಲ್ಲೆಗೊಳಗಾದ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತುಮಕೂರು ವಿಭಾಗದ ಕುಣಿಗಲ್ ಘಟಕದ ಚಾಲಕ ನಾರಾಯಣ (34) ಎಂಬುವರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ. ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾರೆ. ವಿಷ ಸೇವಿಸಿರುವ ವಿಷಯ ತಿಳಿದು ಸ್ನೇಹಿತರು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲ ರೀತಿಯ ತಪಾಸಣೆ ನಡೆಸಿದ ವೈದ್ಯರು ಯಾವುದೇ ಪ್ರಾಣಪಾಯವಿಲ್ಲ ಎಂದು ತಿಳಿಸಿದ್ದಾರೆ.
ಘಟನೆ ವಿವರ: ಡಿ.10ರಂದು ತುಮಕೂರು – ಮೈಸೂರು ನಡುವೆ ಮಾರ್ಗಾಚರಣೆಯಲ್ಲಿದ್ದಾಗ ತುಮಕೂರು ಲಾ ಕಾಲೇಜಿನ ಹತ್ತಿರ ಕುಣಿಗಲ್ ಘಟಕದ ಚಾಲಕ ನಾರಾಯಣ ಅವರಿಗೆ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಹಲ್ಲೆ ಮಾಡಿದ್ದಾರೆ.
ಹಲ್ಲೆಗೆ ಕಾರಣ ಬಸ್ ತುಂಬಾ ರಷ್ ಇದ್ದ ಕಾರಣ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕ ನಾರಾಯಣ ನೇತಾಡಿಕೊಂಡು ಬರಬೇಡಿ ಒಳಗೆ ಬನ್ನಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಬಸ್ ಇಳಿದು ಚಾಲಕನ ಸೀಟ್ ಬಳಿ ಬಂದು ಹಲ್ಲೆ ಮಾಡಿದ್ದಾರೆ.
ಚಾಲಕ ಕರ್ತವ್ಯದ ಮೇಲಿದ್ದಾಗಲೇ ಇಚ್ಛಾನುಸಾರವಾಗಿ ಹೊಡೆದಿರುವ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪೊಲೀಸರು ಸ್ಥಳ ಮಹಜರ್ ಮಾಡದೆ ವಿದ್ಯಾರ್ಥಿಗಳನ್ನು ಬಂಧಿಸದೆ ಸಬೂಬು ಹೇಳಿಕೊಂಡು ದೂರು ಕೊಟ್ಟ ಚಾಲಕ ಮತ್ತು ನಿರ್ವಾಹಕರನ್ನು ಅಲೆಸಿದ್ದಾರೆ.
ಗುರುವಾರ ಬೆಳಗ್ಗಿನಿಂದ ಸಂಜೆವರೆಗೂ ಕಾಯಿಸಿ ಬಳಿಕ ಸ್ಥಳ ಮಹಜರ್ ಮಾಡದೆ ನಾಳೆ ಬನ್ನಿ ಎಂದು ವಾಪಸ್ ಕಳಿಸಿದ್ದಾರೆ. ಜತೆಗೆ ಹಲ್ಲೆ ಮಾಡಿದವರ ವಿರುದ್ಧವೂ 48 ಗಂಟೆ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮನನೊಂದ ಚಾಲಕ ನಾರಾಯಣ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇತ್ತ ವಿಷ ಕುಡಿದಿರುವುದು ತಿಳಿದ ಕೂಡಲೇ ಅವರ ಸ್ನೇಹಿತರು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಷ್ಟೆಲ್ಲವಾದರೂ ಕೂಡ ಸಾರಿಗೆ ಸಂಸ್ಥೆಯಿಂದ ಯಾವುದೇ ಅಧಿಕಾರಿಗಳು ಈ ಬಗ್ಗೆ ವಿಚಾರಿಸಿಲ್ಲ. ಚಾಲಕರ ನೋವಿಗೆ ಸ್ಪಂದಿಸಿಲ್ಲ. ಎಫ್ಐಆರ್ ಆದರೂ ಕೂಡ ಹಲ್ಲೆಕೋರರ ವಿರುದ್ಧ ಪೊಲೀಸರು ಕ್ರಮ ಜರುಗಿಸದೆ ಹೊರಗಡೆ ಬಿಟ್ಟಿರುವುದು ಅವಮಾನ ಆಗಿದೆ ಎಂದು ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)