KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ಅಡೆತಡೆ- ನಿವಾರಣೆಗೆ ಎಂಡಿಗೆ ವಿಕಲಚೇತನ ನೌಕರರ ಸಂಘ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 01-01-2025 ರಿಂದ ಜಾರಿಗೊಳಿಸಲು ಉದ್ದೇಶಿಸಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯ ಸೌಲಭ್ಯ ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿಗಮದಲ್ಲಿ 01-01-2025 ರಿಂದ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯನ್ನು ಜಾರಿಗೊಳಿಸಲು ತಾವುಗಳು ಉದ್ದೆಂಶಿಸಿರುವುದು ಬಹಳ ಸಂತಸದ ವಿಷಯ.
ಈ ನಡುವೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯಲ್ಲಿ ನೌಕರರ ಅವಲಂಬಿತರಾದ ತಂದೆ ಹಾಗೂ ತಾಯಿಗಳು ನಗದು ರಹಿತ Claim ಮಾಡುವ ಸಂದರ್ಭದಲ್ಲಿ ತಿಂಗಳಿಗೆ 8500 +DA ಅಂದರೆ ವಾರ್ಷಿಕ 102000 ರೂ. (ಒಂದು ಲಕ್ಷದ ಎರಡು ಸಾವಿರ ರೂಪಾಯಿ ಮಾತ್ರ) ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ.
ಆದರೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯವರು ನೌಕರರ ಅವಂಲಂಬಿತರಾದ ತಂದೆ ಅಥವಾ ತಾಯಿಯರ ಆದಾಯ ಪ್ರಮಾಣ ಪತ್ರವನ್ನು ಕೊಡುವಾಗ ಕುಟುಂಬದ ವಾರ್ಷಿಕ ಆದಾಯ ಅಂದರೆ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯಾಗಿರುವ ನೌಕರರ ಆದಾಯವನ್ನು ಸೇರಿಸಿ ಕೊಡುತ್ತಿದ್ದಾರೆ.
ತಾಯಿಯ ಅಥವಾ ತಂದೆಯ ಪ್ರತ್ಯೇಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಮನವಿ ಸಲ್ಲಿಸಿದರೂ ಸಹ ಅವರ ಪತ್ಯೇಕ ಆದಾಯ ಪ್ರಮಾಣ ಪತ್ರವನ್ನು ನೀಡದೇ ನೌಕರರ ಆದಾಯ ಸೇರಿಸಿ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನೇ ನೀಡುತ್ತಿದ್ದಾರೆ.
ಹೀಗಾಗಿ ಈ ಆದಾಯ ಪ್ರಮಾಣ ಪತ್ರದಲ್ಲಿ ನೌಕರರ ಆದಾಯ ಸೇರಿಸಿ ನೀಡುವುದರಿಂದ ತಾವು ಜಾರಿಗೊಳಿಸಲು ಉದ್ದೇಶಿಸಿರುವ ನಗದುರಹಿತ ವೈದ್ಯಕೀಯ ಚಿಕಿತ್ಸೆಯಲ್ಲಿ ಆದಾಯ ಪ್ರಮಾಣ ಪತ್ರದಿಂದಾಗಿ ನೌಕರರ ಅವಲಂಬಿತರಾದ ತಂದೆ ಹಾಗೂ ತಾಯಿಯಿ ವೈದ್ಯಕೀಯ ಚಿಕಿತ್ಸೆಯಲ್ಲಿ ವಂಚಿತರಾಗುತ್ತಾರೆ.
ಆದುದರಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ತಾವು ನಿಗಮದಲ್ಲಿ ಇರುವ ಆದಾಯ ಪ್ರಮಾಣ ಪತ್ರದ ಸಮಸ್ಯೆಯನ್ನು ಬಗೆಹರಿಸಿ ನಗದು ರಹಿತ ಚಿಕಿತ್ಸೆಯನ್ನು ನೌಕರರ ಅವಲಂಬಿತರಾದ ತಂದೆ ಹಾಗೂ ತಾಯಿಗೆ ಅನ್ವಯವಾಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕಂದಾಯ ಇಲಾಖೆಯವರು ನೌಕರರ ಹಾಗೂ ಅವರ ತಂದೆ ಹಾಗೂ ತಾಯಿಯಂದಿರ ಆದಾಯ ಸೇರಿಸಿ ನೀಡುವ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಮಾನ್ಯ ಮಾಡಬೇಕೆಂದು ತಮ್ಮಲ್ಲಿ ಈ ಮೂಲಕ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇವೆ ಎಂದು ಪದಾಧಿಕಾರಿಗಳು ಕೋರಿದ್ದಾರೆ.