KSRTC: ಪ್ರಯಾಣಿಕರು ಮೊಬೈಲ್ನಲ್ಲಿ ಜೋರಾಗಿ ಹಾಡು ಹಾಕಿದರೆ ಶಿಕ್ಷೆ ಪಕ್ಕ
ಸಾರಿಗೆ ನಿಗಮದಿಂದ ಮತ್ತೊಮ್ಮೆ ಹೊರಬಿತ್ತು ಮಹತ್ವದ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಯೆ ನಾಲ್ಕೂ ನಿಗಮಗಳ ಬಸ್ಗಳಲ್ಲಿ ಮೊಬೈಲ್ ಉಪಯೋಗಿಸುವ ಪ್ರಯಾಣಿಕರು ಜೋರಾಗಿ ಹಾಡುಗಳನ್ನು ಹಾಕಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್ ದೂರವಾಣಿ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಅದರ ಜತೆಗೆ ಕುಂತಲ್ಲಿ ನಿಂತಲ್ಲಿ ಕೆಲವರು ಜೋರಾಗಿ ಮೊಬೈಲ್ಗಳಲ್ಲಿ ಹಾಡು, ನ್ಯೂಸ್ ಇತರ ಚಟುವಟಿಗಳನ್ನು ನಡೆಸುತ್ತಿದ್ದಾರೆ. ಇದರಿಂದ ಹಲವು ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ.
ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಹಿಂದೆಯೂ ಅಂದರೆ 2021ರಲ್ಲೇ ಈ ಬಗ್ಗೆ ಒಂದು ಮಹತ್ವದ ಆದೇಶ ಹೊರಡಿಸಿತ್ತು. ಬಸ್ನಲ್ಲಿ ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುಚಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.
ಜೋರಾಗಿ ಹಾಡು ಇತ್ಯಾದಿ ಹಾಕುವುದರಿಂದ ಶಬ್ದ ಮಾಲನ್ಯ ಹಾಗೂ ಬಸ್ನಲ್ಲಿ ಪ್ರಯಾಣಿಸುವ ಇತರೆ ಸಹ ಪ್ರಯಾಣಿಕರಿಗೆ ತೊಂದರೆವುಂಟಾಗುತ್ತಿರುವುದರ ಬಗ್ಗೆ ಹಲವಾರು ದೂರುಗಳು ಮತ್ತೆ ಮತ್ತೆ ದಾಖಲಾಗುತ್ತಿರುವುದರಿಂದ ಈ ಎಲ್ಲವನ್ನು ಮನಗೊಂಡು ಸಾರಿಗೆ ಇಲಾಖೆ ಮತ್ತೊಮ್ಮೆ ಜುಲೈ 3-2024ರಂದು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊರಡಿಸಿದ ಸುತ್ತೋಲೆ ಸಂಬಂಧ ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದಮಾಲನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಉಚ್ಚನ್ಯಾಯಾಲಯದಲ್ಲೂ ದಾಖಲಾಗಿದೆ.
ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 , ನಿಯಮ 94 ( 1 ) ( V ) ನ್ನು ಉಲ್ಲಂಘಿಸಿ ನಿಗಮದ ಬಸ್ಗಳಲ್ಲಿ ಪ್ರಯಾಣಿಕರು ಮೊಬೈಲ್ ಮೂಲಕ ಜೋರಾಗಿ ಶಬ್ದ ಹೊರಸೂಸುವಂತೆ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ ಹೀಗಾಗಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
ಈ ಸಂಬಂಧ ಕರ್ತವ್ಯ ನಿರತ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ನೀಡಿ ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತಿರುವಂತೆ ಮೊಬೈಲ್ ದೂರವಾಣಿ ಬಳಸುತ್ತಿದ್ದು ಆ ರೀತಿ ಬಳಸದಂತೆ ವಿನಂತಿಸಬೇಕು.
ಒಂದು ವೇಳೆ ಆ ಪ್ರಯಾಣಿಕ ವಿನಂತಿಗೆ ಮನ್ನಣೆ ನೀಡದೇ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡಲ್ಲಿ, ಅಂಥ ಪ್ರಯಾಣಿಕರನ್ನು ಚಾಲಕ ಅಥವಾ ನಿರ್ವಾಹಕರು ನಿಗಮದ ಬಸ್ನಿಂದ ಇಳಿಸಬಹುದು ಅಂತಹ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹಿಂತಿರುಗಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇನ್ನು ಕರ್ತವ್ಯ ನಿರತ ಚಾಲಕರು ಹಾಗೂ ನಿರ್ವಾಹಕರು ಸೂಕ್ತ ತಿಳಿವಳಿಕೆ ನೀಡಿ ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ಮನವಿ ಸ್ಪಂದಿಸದಿದ್ದರೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲು ನಿಗಮಗೆ ಅಧಿಕಾರವಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.