ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕರ್ತವ್ಯ ನಿರತ ಚಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 8.30ರ ಸಮಯದಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ KSRTC ಮಂಡ್ಯ ಘಟಕದ ಚಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯಿಂದ ಚಾಲಕನ ನಾಲಿಗೆ ಕೂಡ ಕಟ್ಟಾಗಿದ್ದು, ಎಡಗೈ ಊದಿಕೊಂಡಿದೆ.
ಹಲ್ಲೆಕೋರ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಆತನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ಶುಕ್ರವಾರ ಅಂದರೆ ಜ.10ರ ರಾತ್ರಿ 8.30ರ ಸುಮಾರಿಗೆ ಮಂಡ್ಯ ಬಸ್ನಿಲ್ದಾಣದಿಂದ ಅರಕೆರೆ ಮಾರ್ಗವಾಗಿ ಬನ್ನೂರಿಗೆ ಬಸ್ ಹೊರಟಿತ್ತು. ಈ ವೇಳೆ ಬಸ್ ರಶ್ ಆಗಿದೆ. ಈ ನಡುವೆ ಮಾರ್ಗಮಧ್ಯೆ ಮಹಿಳೆಯೊಬ್ಬರನ್ನು ಬಸ್ಗೆ ಹತ್ತಿಸುವುದಕ್ಕೆ ಕೋರಿಕೆ ನೀಲುಗಡೆ ಕೋರಿದ್ದಾರೆ. ಆದರೆ, ಬಸ್ ರಶ್ ಆಗಿದ್ದರಿಂದ ಚಾಲಕ ಬಸ್ನಿಲ್ಲಿಸಿಲ್ಲ. ಇದರಿಂದ ಕೋಪಗೊಂಡ ವ್ಯಕ್ತಿ ಬೈಕ್ನಲ್ಲಿ ಬಸ್ ಹಿಂಬಾಲಿಸಿಕೊಂಡು ಬಂದು ಚಾಲಕನ ಬಳಿ ಹೋಗಿ ಗಲಾಟೆ ಮಾಡಿದ್ದಾನೆ.
ಹೀಗೆ ಇಬ್ಬರ ನಡುವೆ ಮತಿನ ಚಕಮಕಿ ನಡೆದು ಬಳಿಕ ಹಲ್ಲೆ ಮಾಡುವ ಹಂತಕ್ಕೆ ಹೋದ ವ್ಯಕ್ತಿ ಚಾಲಕನಿಗೆ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಚಾಲಕನ ನಾಲಿಗೆ ಕಟ್ಆಗಿದ್ದು, ಎಡಗೈ ಊದಿಕೊಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಸ್ಅನ್ನು ಅಲ್ಲೆ ಬಿಟ್ಟು ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಗೆ ಕಳುಹಿಸಲಾಯಿತು ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ.
ಕರ್ತವ್ಯ ನಿರತ ಸಂಸ್ಥೆಯ ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಬಾರದು ಎಂದು ಎಷ್ಟೇ ಎಚ್ಚರಿಕೆ ನೀಡಿದರು ಕೆಲ ವ್ಯಕ್ತಿಗಳು ಹೀಗೆ ಹಲ್ಲೆ ಮಾಡುತ್ತಿದ್ದಾರೆ. ಬಳಿಕ ಕೇಸ್ ಆಗಿ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇನ್ನಾದರೂ ಪ್ರಯಾಣಿಕರು ಎಚ್ಚೆತ್ತುಕೊಳ್ಳಬೇಕಿದೆ.
ಡ್ಯೂಟಿ ಮೇಲಿರುವ ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದರೆ ಸಾರ್ವಜನಿಕ ಸೇವಾ ನಿರತ ನೌಕರರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ನಿಮಿಷದ ಕೋಪಕ್ಕೆ ಬುದ್ಧಿಕೊಟ್ಟು ಈ ರೀತಿ ಮಾಡಿ ವರ್ಷಾನುಗಟ್ಟೆಲೆ ಜೈಲಿನಲ್ಲಿ ಮುದ್ದೆ ಮುರಿಯುವುದು ಬೇಕಾ? ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.