KSRTC:ಶೇ.96ರಷ್ಟು ನೌಕರರಿಗೆ ಬೇಡದ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ: ಜಂಟಿಗೆ ಲಿಖಿತ ಹಿಂಬರಹ ಕೊಟ್ಟ ಒಕ್ಕೂಟ
ಬೆಂಗಳೂರು: ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇದೇ ಡಿ.31 ರಿಂದ ಕರೆ ನೀಡಿರುವ ಮುಷ್ಕರಕ್ಕೆ ನಮ್ಮ ಬೆಂಬಲ ನೀಡದಿರಲು ತೀರ್ಮಾನಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಲಿಖಿತ ಹೇಳಿಕೆ ನೀಡಿದೆ.
ಇಂದು ಡಿ.19ರಂದು ಈ ಸಂಬಂಧ ಎಐಟಿಯುಸಿ ಕಚೇರಿಗೆ ಖುದ್ದು ಹೋಗಿ ಒಕ್ಕೂಟದ ಪದಾಧಿಕಾರಿಗಳು ಬೆಂಬಲವಿಲ್ಲ ಎಂಬ ಪತ್ರವನ್ನು ಕೊಟ್ಟು ಬಂದಿದ್ದಾರೆ.
ಒಕ್ಕೂಟದ ಪತ್ರದಲ್ಲೇನಿದೆ?: 13/12/2024 ರಂದು ತಾವೂ (ಜಂಟಿ ಕ್ರಿಯಾ ಸಮಿತಿ) ನೀಡಿರುವ ಪತ್ರದಲ್ಲಿ 31/12/2024 ರಿಂದ ನಡೆಸುತ್ತಿರುವ ಮುಷ್ಕರಕ್ಕೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ಬೆಂಬಲ ಕೇಳಿ ಪತ್ರ ಬರೆದಿರುವುದಕ್ಕೆ ನಾವು ಅಭಾರಿಯಾಗಿದ್ದೇವೆ
ತಾವು 31-12-2024 ರಿಂದ ನಡೆಸುವ ಮುಷ್ಕರಕ್ಕೆ ನಮ್ಮ ಒಕ್ಕೂಟದ ಬೆಂಬಲ ಕೋರಿರುವ ಬಗ್ಗೆ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಹಾಗೂ ಕೂಟದ ಎಲ್ಲ ವಿಭಾಗ ಹಾಗೂ ಘಟಕಗಳ ಪದಾಧಿಕಾರಿಗಳೊಂದಿಗೆ ಡಿ.13ಹಾಗೂ 14ರಂದು ಸಭೆ ನಡೆಸಿದಾಗ ಈ ಅಭಿಪ್ರಾಯ ವ್ಯಕ್ತವಾಗಿದೆ.
1) ಮುಷ್ಕರಕ್ಕೆ ಕರೆ ಕೊಡುವ ಮೊದಲು ನಮ್ಮ ಸಂಘಟನೆಗೆ ಹಾಗೂ ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲ ಅಸೋಶಿಯೇಶನ್‌ಗಳಿಗೆ ಮಾಹಿತಿಯನ್ನು ನೀಡಿಲ್ಲ ಹಾಗೂ ಸಹಕಾರ ಕೋರಿಲ್ಲ.
2) ಇನ್ನು ತಮ್ಮ ಬೇಡಿಕೆಯು 4 ವರ್ಷಕ್ಕೆ ಒಮ್ಮೆ ನಡೆಯುವ ಚೌಕಸಿ ವೇತನ ಪರಿಷ್ಕರಣೆಗೆ ಸಂಬಂಧಿಸಿದ್ದು, ನಮ್ಮ ಬೇಡಿಕೆಯು 7ನೇ ವೇತನ ಆಯೋಗ ಮಾದರಿ ಅನುಷ್ಠಾನವಿರುವ ಕಾರಣ ನಮ್ಮ ಬೇಡಿಕೆಗೆ ತದ್ಭವಿರುದ್ಧವಾಗಿದೆ.
3) ತಾವು ಮುಷ್ಕರಕ್ಕೆ ಕರೆ ನೀಡುವ ಮೊದಲು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಬಳಿ ಯಾವುದಾದರೂ ಮಾದರಿಯಲ್ಲಿ ಅವರ ಬೇಡಿಕೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ (ಘಟಕಗಳ ಬಳಿ ಹೋಗಿ ಅಥವಾ ಸಮಾಜಿಕ ಜಾಲತಾಣಗಳಲ್ಲಿ) ಬಹುತೇಕ ನೌಕರರ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕಿತ್ತು.
4) ಸಂಸ್ಥೆಯಲ್ಲಿ 96% ನೌಕರರು ಹಾಗೂ ಎಲ್ಲ ಅಧಿಕಾರಿಗಳು ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿ ಜಾರಿ) ಜಾಡಿ ಮಾಡುವಂತೆ ಬೇಡಿಕೆ ಇಡಲಾಗಿದೆ. ಆದರೆ, ನಿಮ್ಮ ಬೇಡಿಕೆಯು ಸಾರಿಗೆ ನೌಕರರ ಹಿತಾಸಕ್ತಿಯ ವಿರುದ್ಧವಾಗಿದೆ.
ಈ ಅಂಶಗಳ ಹಿನ್ನೆಲೆಯಲ್ಲಿ ನೀವು ಕರೆ ಕೊಟ್ಟಿರುವ ಈ ಮುಷ್ಕರಕ್ಕೆ ಯಾವುದೇ ರೀತಿಯಲ್ಲಿ ಬೆಂಬಲವನ್ನು ನೀಡದಿರಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಕಳೆದ ಬಾರಿಯ ವೇತನ ಪರಿಷ್ಕರಣೆ ಹೇಗಾಯಿತು? ಕಳೆದ ಬಾರಿ 2020ರ ವೇತನ ಪರಿಷ್ಕರಣೆಗಾಗಿ ತಮ್ಮ ಜಂಟಿ ಕ್ರಿಯಾ ಸಮಿತಿ ವತಿಯಿಂದ ಮೂಲವೇತನ ಮತ್ತು ಬಿಡಿಎಗೆ (BASIC+BDA) ಸೇರಿಸಿ 25% ರಷ್ಟು ನೀಡಬೇಕೆಂದು ಬೇಡಿಕೆಗೆ ತಾವೂಗಳು ನೀಡಿದ ಮುಷ್ಕರದ ಕರೆಗೆ, ನಾವು ನಮ್ಮ ಬೇಡಿಕೆಯಾದ ಸರಿಸಮಾನ ವೇತನ ನೀಡುವ ಬೇಡಿಕೆಯನ್ನು ಆ ಸಂದರ್ಭಕ್ಕೆ ಬಿಟ್ಟು, ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದೆವು.
ಆದರೆ ತಾವು ರಾತ್ರೋರಾತ್ರಿ ತರಾತುರಿಯಲ್ಲಿ ಕೇವಲ ಮೂಲ ವೇತನಕ್ಕೆ 15% ವೇತನ ಒಪ್ಪಿ ನೌಕರರ ಹಿತಾಸಕ್ತಿಯನ್ನು ಬದಿಗೆ ಸರಿಸಿರುತ್ತೀರಿ. ಈ ನಿಮ್ಮ ತರಾತುರಿಯ ಅವೈಜ್ಞಾನಿಕ ನಿರ್ಧಾರದಿಂದ ನಿವೃತ್ತ ನೌಕರರಿಗೆ 2020ರ ವೇತನ ಪರಿಷ್ಕರಣೆಯ ಆರ್ಥಿಕ ಸೌಲಭ್ಯಗಳು ಸಿಗಲಿಲ್ಲ ಹಾಗೂ ಎಲ್ಲ ನೌಕರರಿಗೆ 38 ತಿಂಗಳ ವೇತನದ ಹಿಂಬಾಕಿ ಸಹ ಇದುವರೆಗೂ ಬಂದಿಲ್ಲ. ಇಂತಹ ಸ್ವಾರ್ಥ ಹಾಗೂ ಸ್ವಪ್ರತಿಷ್ಠೆಗಾಗಿ ಮಾಡುವ ಹೋರಾಟಗಳು ನಮ್ಮ ನೌಕರರ ಬಾಳಿಗೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ.
ಆದರಿಂದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟ, ಕೆ.ಎಸ್.ಆರ್.ಟಿ.ಸಿ ಆಫೀಸರ್ಸ್ ವೆಲ್ವೇರ್ ಅಸೋಶಿಯೇಶನ್(ರಿ), ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಲೆಕ್ಕಪತ್ರ, ಮೇಲ್ವಚಾರಕ & ಅಧೀಕ್ಷಕರ ಕ್ಷೇಮಾಭಿವೃಧಿ ಸಂಘ, ಕೆ.ಎಸ್.ಆರ್.ಟಿ.ಸಿ ಸಂಚಾರ ಮೇಲ್ವಚಾರಕ ಸಿಬ್ಬಂದಿಗಳ ಕ್ಷೇಮಾಭಿವೃಧಿ ಸಂಘ, ಕೆ.ಎಸ್.ಆರ್.ಟಿ.ಸಿ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ, ಬಿ.ಎಂ.ಎಸ್ ಸಂಘಟನೆ, ಕೆ.ಎಸ್.ಆರ್.ಟಿ.ಸಿ & ಬಿ.ಎಂ.ಟಿ.ಸಿ ಯುನೈಟೆಡೆ ಎಂಪ್ಲಾಯೀಸ್ ಯೂನಿಯನ್.
ಕೆ.ಎಸ್.ಆರ್.ಟಿ.ಸಿ ನೌಕರರ ಕುಟುಂಬ ಕ್ಷೇಮಾಭಿವೃದಿ ಸಂಘ ಹಾಗೂ ಇತರೆ ಅಧಿಕಾರಿಗಳ ಸಂಘಟನೆಗಳು, ಸಂಸ್ಥೆಯ ಹಲವು ಕನ್ನಡಪರ ಸಂಘಟನೆಗಳು, ಜಾತಿ ಮತ್ತು ಇತರೆ ಕ್ಷೇಮಾಭಿವೃಧಿ ಸಂಘಗಳ ಹಾಗೂ ಬಹುತೇಕ ನೌಕರರ ಮತ್ತು ಅಧಿಕಾರಿಗಳ ಬೇಡಿಕೆಯಾದ ಚುನಾವಣೆ ಪೂರ್ವ ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ ಪಡೆಯುವ ಬೇಡಿಕೆಯ ಮತ್ತು ಹಿತಾಸಕ್ತಿಯ ವಿರುದ್ಧವಾಗಿರುವ ನಿಮ್ಮ ಈ ಏಕಪಕ್ಷೀಯ ಮುಷ್ಕರಕ್ಕೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ಬೆಂಬಲ ನೀಡದಿರಲು ತೀರ್ಮಾನಿಸಿದೆ. ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.