ಬೆಂಗಳೂರು: ವಿಧಾನಸಭೆ ಉಪಸಭಾಪತಿ ಹಾಗೂ ಸವದತ್ತಿ ಶಾಸಕ ಆನಂದ ಚಂದ್ರಶೇಖರ್ ಮಾಮನಿ ತಡರಾತ್ರಿ ನಿಧನರಾಗಿದ್ದಾರೆ.
56 ವರ್ಷದ ಆನಂದ ಮಾಮನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ತಡ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆನಂದ್ ಮಾಮನಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆಸ್ಪತ್ರೆಗೆ ತೆರಳಿ ಮಾಮನಿ ಅವರ ಆರೋಗ್ಯ ವಿಚಾರಿಸಿದ್ದರು.
ಸವದತ್ತಿಯಲ್ಲಿದ್ದ ಅವರ ಕುಟುಂಬ ವರ್ಗದವರು ವಿಷಯ ತಿಳಿಯುತ್ತಿದ್ದಂತೆ ಬೆಳಗಿನಜಾವ ಬೆಂಗಳೂರಿಗೆ ಬರುತ್ತಿದ್ದಾರೆ. ಕುಟುಂಬ ವರ್ಗ ಮಾಮನಿ ಪಾರ್ಥಿವ ಶರೀರವನ್ನು ಇಂದು ಸವದತ್ತಿಗೆ ಕೊಂಡೊಯ್ಯಲಿದ್ದು, ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಷಯ ತಿಳಿದ ತಕ್ಷಣ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಣಿಪಾಲ್ ಆಸ್ಪತ್ರೆಗೆ ತೆರಳಿ ಮೃತರ ದರ್ಶನ ಪಡೆದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ವಿಧಾನ ಸಭೆಯ ಡೆಪ್ಯೂಟಿ ಸ್ಪೀಕರ್ ಕೂಡ ಆಗಿದ್ದ ಮಾಮನಿ ಸದಾ ಜನರ ಜೊತೆಗಿದ್ದವರು. ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಚಿವರು ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ನಾಯಕರು ಕಂಬನಿ ಮಿಡಿದಿದ್ದು, ಅವರ ಅಗಲಿಕೆಯ ದುಃಖ ಬರಿಸುವ ಶಕ್ತಿಯನ್ನು ಕುಟುಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.