ರಾಯಚೂರು: ಇಡೀ ರಾಜ್ಯಕ್ಕೆ ಅಕ್ಕಿ, ಬೆಳಕು, ಚಿನ್ನ ಕೊಡುವ ರಾಯಚೂರು ಜಿಲ್ಲೆಗೆ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಕಳೆದ 500 ದಿನಗಳಿಂದ ಏಮ್ಸ್ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಯಾವೊಬ್ಬ ನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬಸವರಾಜ್ ಕಳಸ ನೇತೃತ್ವದಲ್ಲಿ ಕಳೆದ 500 ದಿನಗಳಿಂದ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಚಂದ್ರು ಬೆಂಬಲ ಸೂಚಿಸಿದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಅವರು, ಹೋರಾಟಗಾರರ ಜೊತೆ ಮಾತನಾಡಿ, ಆಮ್ ಆದ್ಮಿ ಪಕ್ಷದಿಂದ ಎಲ್ಲಾ ರೀತಿಯ ಬೆಂಬಲ ಕೊಡುವುದಾಗಿ ಘೋಷಿಸಿದರು.
ಕಾನೂನು ಪ್ರಕಾರ ಒಪ್ಪಿಗೆ ನೀಡಿದ್ದ ಐಐಟಿಯನ್ನು ಕೂಡ ನಮ್ಮಿಂದ ಕಿತ್ತುಕೊಳ್ಳಲಾಗಿದೆ. 371ಜಿ, ನಂಜುಂಡಪ್ಪ ವರದಿ ಕೂಡ ಈ ಭಾಗಕ್ಕೆ ಉಪಯೋಗವಾಗಿಲ್ಲ. ರೈತರಿಗೆ ನೀರು ಕೊಡಿ ಎಂದರೆ ಬ್ರಾಂದಿ ಕೊಡಲು ಈ ಸರ್ಕಾರ ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏಮ್ಸ್‌ಗೆ ಜಾಗ ವಿದ್ಯುತ್ ಮತ್ತು ಉಳಿದ ಅನುಕೂಲ ಮಾಡಿಕೊಡುವುದು ರಾಜ್ಯ ಸರ್ಕಾರ. ಹೀಗಾಗಿ, ರಾಜ್ಯ ಸರ್ಕಾರ ಹೇಳುವ ಜಾಗದಲ್ಲಿ ಕೇಂದ್ರ ಸರ್ಕಾರ ಏಮ್ಸ್ ಸ್ಥಾಪನೆ ಮಾಡಬೇಕು. ಇಲ್ಲವೆಂದರೆ ಇದು ಯಾವ ರೀತಿಯ ಪ್ರಜಾಪ್ರಭುತ್ವ. ಈ ಭಾಗಕ್ಕೆ ಅನಂತಕುಮಾರ್ ಅವರಿಂದ ಮೋಸ ಆಗಿದೆ. ಪ್ರಹ್ಲಾದ್ ಜೋಶಿ ಅವರಿಂದಲೂ ಮೋಸವಾಗುತ್ತಿದೆ. ಏಮ್ಸ್ ಸ್ಥಾಪನೆ ಆಗದಿದ್ದರೆ, ಈ ಬಾರಿ ಧಾರವಾಡಕ್ಕೆ ಬಂದು ಚುನಾವಣೆಯಲ್ಲಿ ಸೋಲಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಎಚ್ಚರಿಕೆ ನೀಡಿದರು.
ಇಲ್ಲಿ ಸೂಕ್ತ ಆರೋಗ್ಯ ವ್ಯವಸ್ಥೆ ಇಲ್ಲ, ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಈ ಭಾಗಕ್ಕೆ ಏಮ್ಸ್ ಅಗತ್ಯ ಇದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಿ ಜನವರಿ ವೇಳೆಗೆ ಏಮ್ಸ್ ಸ್ಥಾಪನೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳಬೇಕು, ಇಲ್ಲ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.