ಮೋದಿಯವರು ವಾರಕ್ಕೊಮ್ಮೆ ಬರುತ್ತಿರಲಿ: ಶಾಸಕರ ಕಾರ್ಯವೈಖರಿಗೆ ಪೃಥ್ವಿ ರೆಡ್ಡಿ ವ್ಯಂಗ್ಯ
ಎಎಪಿಯಿಂದ ʻನಮ್ಮಲ್ಲಿಗೂ ಬನ್ನಿ ಮೋದಿʼ ಅಭಿಯಾನ
ಬೆಂಗಳೂರು: ಶಾಸಕರು ನಿರಂತರವಾಗಿ ಕೆಲಸ ಮಾಡುತ್ತಿರಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೊಮ್ಮೆ ಬರುತ್ತಿರಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದರ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪೃಥ್ವಿ ರೆಡ್ಡಿ, “ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಾರೆಂದರೆ ಖುಷಿಯಾಗುತ್ತದೆ.
ಸದಾ ಗೊರಕೆ ಹೊಡೆಯುವ ಇಲ್ಲಿನ ಬಿಜೆಪಿ ಶಾಸಕರು ರಸ್ತೆಗುಂಡಿ ಮುಚ್ಚಿಸುತ್ತಾರೆ. ಸುಣ್ಣಬಣ್ಣ ಹೊಡೆಯುತ್ತಾರೆ. ನನ್ನ ಒಂದೇ ಮನವಿ ಮೋದಿಯವರೇ, ನೀವು ಆಗಾಗ ವಾರಕ್ಕೊಮ್ಮೆ ಬರುತ್ತಿರಿ. ನಿಮ್ಮ ಶಾಸಕರು ಆಗಲಾದರೂ ಕೆಲಸ ಮಾಡುತ್ತಾರೋ ನೋಡೋಣ” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ @narendramodi ಅವರು ಬೆಂಗಳೂರಿಗೆ ಬರುತ್ತಾರೆಂದರೆ ಖುಷಿಯಾಗುತ್ತದೆ.
ಸದಾ ಗೊರಕೆ ಹೊಡೆಯುವ @BJP4Karnataka ದ ಶಾಸಕರು ರಸ್ತೆಗುಂಡಿ ಮುಚ್ಚುತ್ತಾರೆ, ಸುಣ್ಣ ಬಣ್ಣ ಹೊಡೆಯುತ್ತಾರೆ.
ನನ್ನ ಒಂದೇ ಮನವಿ :
ಮೋದಿಯವರೆ, ಆಗಾಗ ವಾರಕ್ಕೊಮ್ಮೆ ಬರುತ್ತಿರಿ, ನಿಮ್ಮ ಶಾಸಕರು ಆಗಲಾದರೂ ಮಾಡುತ್ತಾರೋ ನೋಡೋಣ. pic.twitter.com/DBWqzlJU62— Prithvi Reddy (@aapkaprithvi) November 8, 2022
ಎಎಪಿಯಿಂದ ʻನಮ್ಮಲ್ಲಿಗೂ ಬನ್ನಿ ಮೋದಿʼ ಅಭಿಯಾನ: ಪ್ರಧಾನಿ ನರೇಂದ್ರ ಮೋದಿಯವರು ಸಂಚರಿಸುವ ರಸ್ತೆಗಳ ಗುಂಡಿಗಳನ್ನು ಮಾತ್ರ ಬಿಬಿಎಂಪಿ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿಯು ಬುಧವಾರದಿಂದ “ನಮ್ಮಲ್ಲಿಗೂ ಬನ್ನಿ ಮೋದಿ” ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, “ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಪ್ರಧಾನಿ ಮೋದಿ ಬರುತ್ತಾರೆಂದರೆ ಮಾತ್ರ ಇವುಗಳನ್ನು ಮುಚ್ಚುತ್ತದೆ. ಆದ್ದರಿಂದ ಮೋದಿಯವರು ಎಲ್ಲ ರಸ್ತೆಗಳಲ್ಲೂ ಸಂಚರಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ವಿನೂತನ ಚಳವಳಿ ಆರಂಭಿಸಿದೆ” ಎಂದು ತಿಳಿಸಿದರು.