ಬೆಂಗಳೂರು: 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷವು ಚುನಾವಣಾ ಸಮಿತಿ ರಚಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳನ್ನು ಹೆಸರನ್ನು ಪ್ರಕಟಿಸಲಾಗುವುದು. ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಎಲ್ಲರಿಗೂ ಇದೆ. ಹೀಗಾಗಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ ಬಿಜೆಪಿ ಸೋಲುವುದು ನಿಶ್ಚಿತವಾಗಿದ್ದು, ಅಲ್ಲಿ ಆಕಾಂಕ್ಷಿಗಳು ಕಡಿಮೆ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳಿರುವಾಗಲೇ ರಾಜ್ಯದಲ್ಲಿ ಚುನಾವಣಾ ರಾಜಕೀಯ ಗರಿಗೆದರಿದ್ದು, ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಇತ್ತ ಕಾಂಗ್ರೆಸ್ ತನ್ನ ಪಟ್ಟಿಯನ್ನು ಜನವರಿ ವೇಳೆಗೆ ಬಿಡುಗಡೆ ಮಾಡುವ ಬಗ್ಗೆ ಸಿದ್ಧತೆಯಲ್ಲಿ ತೊಡಗಿದೆ.
ಖರ್ಗೆ ಮಾತು ತಿರುಚಿ ವಾಗ್ದಾಳಿ: ಇನ್ನು ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ತಿರುಚಿ ವಾಗ್ದಾಳಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಪೂರ್ವಜರಾದ ಆರೆಸ್ಸೆಸ್ಸ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಬ್ರಿಟಿಷರ ಗುಲಾಮರಾಗಿದ್ದರು ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.
ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ: ಕಾಂಗ್ರೆಸ್ ಮುಖಂಡರನ್ನು ನಾಯಿಗಳಿಗೆ ಹೋಲಿಸಿರುವ ಬಿಜೆಪಿ ಮುಖಂಡರನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ನಾವಂತೂ ಅವರನ್ನು ನಾಯಿಗೆ ಹೋಲಿಸುವುದಿಲ್ಲ. ಕಾರಣ ನಾಯಿ ಅತ್ಯಂತ ನಿಯತ್ತಿನ ಪ್ರಾಣಿಯಾಗಿದೆ. ಹೀಗಾಗಿ ಅವರನ್ನು ಬೇರೆ ಪ್ರಾಣಿಗೆ ಹೋಲಿಸಬೇಕು. ಇವರಿಗೆ ಯಾವ ಪ್ರಾಣಿ ಸೂಕ್ತ ಎಂದು ನಂತರದ ದಿನಗಳಲ್ಲಿ ಹೇಳುತ್ತೇನೆ ಎಂದರು.