ಬೆಂಗಳೂರು: ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇದೇ ಮಾ.11 ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿದರುವ ಅವರು, ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರು ಕರೆ ನೀಡಿ, ದೇಶ ವ್ಯಾಪಿ ಇಪಿಎಸ್ ನಿವೃತ್ತರು ಇದೇ ಮಾರ್ಚ್ 11 ರಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, (ಕನಿಷ್ಠ 7500 ರೂ. ಭತ್ಯೆ, ವೈದ್ಯಕೀಯ ಸೌಲಭ್ಯ, ಇಪಿಎಸ್ ವ್ಯಾಪ್ತಿಯ ನಿವೃತ್ತರಿಗೆ 5000 ರೂ.) ಪ್ರತಿಭಟನೆ ಮೂಲಕ ಮನವಿ ಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಅದರಂತೆ ರಾಷ್ಟ್ರೀಯ ಸಂಘರ್ಷ ಸಮಿತಿ, BMTC & KSRTC ಸಂಘಟನೆ ವತಿಯಿಂದ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಎಲ್ಲ ನಿವೃತ್ತ ನೌಕರರು ಜಮಾವಣೆ ಗೊಂಡು, ಪ್ರತಿಭಟನೆ ಮೂಲಕ ಮನವಿಪತ್ರ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಇದೇ ವೇಳೆ ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕರಾದ ರಮಾತಾಂತ ನರಗುಂದ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಲಿದ್ದು, ಕೈಗೊಳ್ಳಬೇಕಾದ ಕೆಲವೊಂದು ಮಹತ್ವದ ಸಂಗತಿಗಳನ್ನು ತಿಳಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಇನ್ನು ಇಪಿಎಫ್ಒ ಅಧಿಕಾರಿಗಳ ಮೊಂಡುತನಕ್ಕೆ ನಾವು ಹೆದರುವುದಿಲ್ಲ. ಇಪಿಎಸ್ ಪಿಂಚಣಿದಾರರ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಇಷ್ಟರಲ್ಲಿಯೇ ಪಾರ್ಲಿಮೆಂಟ್ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲೇಬೇಕು!!!. ಸತ್ಯಕ್ಕಾಗಿ ನಡೆಯುವ ಈ ಹೋರಾಟದಲ್ಲಿ ಜಯ ಶತಸಿದ್ಧ, ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ನಮ್ಮ ಸಂಘಟನೆಯು ಕಳೆದ ಐದಾರು ವರ್ಷಗಳಿಂದ ನಡೆಸಿದ ಹೋರಾಟದ ದಾರಿಯನ್ನು ಅವಲೋಕಿಸಿದ್ದಲ್ಲಿ, ಮೈ ನವೀರೇಳುತ್ತದೆ, ಆಕ್ರೋಶ (akrosha) ಉಕ್ಕಿ ಬರುತ್ತದೆ. ಅದೆಷ್ಟು ಜೀವಗಳು ಬಳಲಿ ಬೆಂಡಾಗಿ ಹೋದವು.
ಇನ್ನು ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಇಪಿಎಸ್ ನಿವೃತ್ತರು ಕಳೆದ ಐದು ವರ್ಷಗಳಿಂದ ನಡೆಸಿದ ಉಪವಾಸ ನಿರಶನಕ್ಕೆ ಪ್ರತಿಫಲ ಇದೇನಾ?. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೂ ಉಂಟೇ? ಎಂಬ ಅನುಮಾನ ಮೂಡುತ್ತಿದೆ. ಇಪಿಎಸ್ ನಿವೃತ್ತರ ಸಹನೆಯ ಕಟ್ಟೆ ಒಡೆಯುತ್ತಿದೆ. ಇದಕ್ಕೆಲ್ಲ ಮಾರ್ಗೋಪಾಯ ಇಲ್ಲವೇ?. ಇನ್ನೆಷ್ಟು ವರ್ಷ ಈ ವೃದ್ಧಜೀವಗಳು ಹೋರಾಟ ಮಾಡಬೇಕು ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಈ ಎಲ್ಲ ಅಂಶಗಳ ಬಗ್ಗೆ, ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಕಟ್ಟ ಕಡೆಯ ಎಚ್ಚರಿಕೆ ನೀಡುವ ಸಲುವಾಗಿ, ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಲಾಗಿದೆ.
ಇಪಿಎಸ್ ನಿವೃತ್ತರ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ, ಮಾ.11ರ ಸೇೂಮವಾರ ಬೆಳಗ್ಗೆ 11 ಗಂಟೆಗೆ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಪ್ರತಿಭಟನೆ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಲು ಪ್ರತಿಯೊಬ್ಬರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.