ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳ ಸಾರಿಗೆ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಚರ್ಚಿಸಲು ಸಾರಿಗೆ ಸರ್ವ ಸಂಘಟನೆಗಳ ಸಭೆಯನ್ನು ನಾಳೆ (ಡಿ.17) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಕರೆಯಲಾಗಿದೆ.
ಈ ಸಭೆಯು ನಾಳೆ ಬೆಳಗ್ಗೆ 11 ಗಂಟೆಗೆ ಬಸವನಗುಡಿಯ ಡಿ.ವಿ.ಜಿ.ರಸ್ತೆಯಲ್ಲಿರುವ ಮಣಿ ಸ್ಟೋರ್ ಬಳಿಯ ನಂ.12, ಸಂಪರ್ಕ ಕೇಂದ್ರದಲ್ಲಿ ನಡೆಯಲಿದೆ. ಹೀಗಾಗಿ ಈ ಸಭೆಯಲ್ಲಿ ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಪೆಢರೇಷನ್, ಐಎನ್ ಟಿಯುಸಿ, ಸಿಐಟಿಯು, ಬಿಎಂಎಸ್, ಯೂನಿಟೆಂಡ್ ಎಂಪ್ಲಾಯಿಸ್ ಯೂನಿಯನ್, ಕೆಬಿಎನ್ಎನ್, ಕೆಎಸ್ಆರ್ಟಿಸಿ ನೌಕರರ ಕೂಟ, ಜಂಟಿ ಕ್ರಿಯಾ ಸಮಿತಿ, ಸಮಾನ ಮನಷ್ಯರ ವೇದಿಕೆ ಮತ್ತು ಎಸ್ಸಿ/ಎಸ್ಟಿ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ನೌಕರರ ಸಂಘದ ಗೌರವ ಅಧ್ಯಕ್ಷ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ಸಮಸ್ತ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳಾದ ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಎಲ್ಲ ಸಂಘಟನೆಗಳು, ಸಾರಿಗೆ ನೌಕರರ ಸಮಸ್ಯೆಗಳ ಮತ್ತು ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಆಡಳಿತ ಮಂಡಳಿಯವರಿಗೆ ಹಲವು ಬಾರಿ ಮನವಿಯನ್ನು ಸಲ್ಲಿಸಿದರೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದರಿಂದ ನಾಲ್ಕು ನಿಗಮಗಳ ಸಾರಿಗೆ ನೌಕರರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ.
01-01-2020 ರಿಂದ ಇಲ್ಲಿಯವರೆಗೆ ವೇತನ ಹೆಚ್ಚಳವಾಗದೆ ಸಾರಿಗೆ ನೌಕರರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಜತೆಗೆ ಸಾರಿಗೆ ಸಂಸ್ಥೆಗಳ ಕೆಲಸದ ಒತ್ತಡ ಮತ್ತು ಕಿರುಕುಳದಿಂದ ನೌಕರರು ಮಾನಸಿಕವಾಗಿ ನೊಂದು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ದುರದುಷ್ಟಕರ ವಿಷಯ.
ಇನ್ನು ಇದರ ಜತೆಗೆ ಮುಷ್ಕರದ ಸಮಯದಲ್ಲಿ ಆಗಿರುವಂತಹ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ನೌಕರರ ಹಿತದೃಷ್ಟಿಯಿಂದ ಎಲ್ಲ ಸಂಘಟನೆಗಳು ಒಮ್ಮತದಿಂದ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಬೇಕಾಗಿದೆ. ಹೀಗಾಗಿ ಎಲ್ಲರೂ ಆಗಮಿಸಿ ನೌಕರರಿಗೆ ಅನುಕೂಲ ಕಲ್ಪಿಸುವ ಸಂಬಂಧ ಚರ್ಚಿಸಿ ತುರ್ತಾಗಿ ರೂಪುರೇಷೆ ಸಿದ್ಧಪಡಿಸಬೇಕೆ. ಆದ್ದರಿಂದ ಈ ಸಭೆಗೆ ಸಂಘಟನೆಯ ಎಲ್ಲ ಮುಖಂಡರು ತಪ್ಪದೆ ಬರಬೇಕು ಎಂದು ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.