ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವಸ್ತು ಸ್ಥಿತಿ ಹಾಗೂ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಚರ್ಚಿಸಲು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ನಿಗಮ ಮಟ್ಟದ ನೋಂದಾಯಿತ ಕಾರ್ಮಿಕ ಸಂಘಟನೆಗಳ ಸಭೆ ಕರೆಯಲಾಗಿದೆ.
ಈ ಸಭೆಯನ್ನು ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಶಾಂತಿನಗರದಲ್ಲಿರುವ ಸಾರಿಗೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಸಭೆಗೆ ಪ್ರತಿ ಕಾರ್ಮಿಕ ಸಂಘದಿಂದ ಇಬ್ಬರು ಪದಾಧಿಕಾರಿಗಳು ಮಾತ್ರ ಹಾಜರಾಗಬೇಕು ಎಂದು ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವಸ್ತು ಸ್ಥಿತಿ ಹಾಗೂ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಕುರಿತಾಗಿ ಅಧ್ಯಯನ ನಡೆಸಿ ಮೂರು ತಿಂಗಳ ಒಳಗಗೆ ವರದಿ ನೀಡುವ ಸಲುವಾಗಿ ಈಗಾಗಲೇ ಒಂದೂವರೆ ತಿಂಗಳ ಹಿಂದೆಯೇ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ.
ಆ ಸಮಿತಿಗೆ ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ಸಂಸ್ಥೆ, ಬಿಎಂಟಿಸಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಕುರಿತಾಗಿ ಮೂರು ತಿಂಗಳೊಳಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.
ನಷ್ಟದಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳ ಪುನರ್ ನಿರ್ಮಾಣಕ್ಕೆ ಹಲವು ಸುಧಾರಣೆಗಳನ್ನು ತರುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಸರ್ಕಾರ ಕೊಟ್ಟಿರುವ ಗಡಿವಿನೊಳಗೆ ವರದಿ ಸಲ್ಲಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಜ.19ರಂದು ನಿಗಮಗಳ ಕಾರ್ಮಿಕ ಸಂಘಟನೆಗಳ ಸಭೆ ಕರೆದಿದೆ.
ಸಮಿತಿ ವರದಿ ಸಲ್ಲಿಕೆಗೆ ಮೂರು ತಿಂಗಳ ಗಡುವು ನೀಡಿದ್ದು, ಅದರ ವರದಿ ಆಧರಿಸಿ ನೌಕರರ ಸಮಸ್ಯೆ, ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಸಮತಿ ಉಳಿದ ಇನ್ನು ಒಂದೂವರೆ ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿರುವುದರಿಂದ ಜ.19ರಂದು ನಡೆಯುವ ಸಭೆ ಕಾರ್ಮಿಕರ ಪಾಲಿಗೆ ಬಹು ಮುಖ್ಯವಾಗಿದೆ.
ಕಾರ್ಮಿಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಭೆಯಲ್ಲಿ ಭಾಗವಹಿಸುವ ಸಂಘಟನೆಗಳ ಪದಾಧಿಕಾರಿಗಳು ಸಮಿತಿಗೆ ಪೂರಕವಾದ ಸಲಹೆ ಸೂಚನೆಗಳನ್ನು ಕೊಡಬೇಕಿದೆ. ಸಂಘಟನೆಗಳ ಪದಾಧಿಕಾರಿಗಳು ಕೊಡುವ ಸಲಹೆ ಕಾರ್ಮಿಕರ ಅಳಿವು ಉಳಿವನ್ನು ನಿರ್ಧರಿಸಲಿದೆ ಎಂಬುದನ್ನು ಪದಾಧಿಕಾರಿಗಳು ತಿಳಿದುಕೊಳ್ಳುವುದು ತುಂಬ ಅವಶ್ಯವಾಗಿದೆ.