
ಚಂಡೀಗಢ: ಕಾಂಗ್ರೆಸ್ ಯುವ ಕಾರ್ಯಕರ್ತೆಯೊಬ್ಬರನ್ನು ಹತ್ಯೆ ಮಾಡಿದ ಕಿಡಿಗೇಡಿಗಳು ಬಳಿಕ ಸೂಟ್‌ಕೇಸ್‌ನಲ್ಲಿ ಆಕೆಯ ಮೃತ ದೇಹವನ್ನು ಹಾಕಿ ಪರಾರಿಯಾಗಿರುವ ಘಟನೆ ಸಾರ್ವಜನಿಕರು ಸೇರಿದಂತೆ ನಗರದ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಕಳೆದ ವರ್ಷ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಹಿಮಾನಿ ನರ್ವಾಲ್ (22) ಅವರ ಮೃತದೇಹವೇ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿರುವುದು.
ಇನ್ನು ಹಿಮಾನಿ ಸಾವಿನ ಬಗ್ಗೆ ಹಲವು ರೀತಿಯ ಅನುಮಾನಗಳು ಭುಗಿಲೆದ್ದಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಪತ್ತೆ ಹೇಗಾಯಿತು?: ನಗರದ ಸಂಪ್ಲಾ ಬಸ್ ನಿಲ್ದಾಣದ ಬಳಿ ಬಿದ್ದಿದ್ದ ಸೂಟ್‌ಕೇಸ್ ಅನ್ನು ದಾರಿಹೋಕರು ನೋಡಿದ್ದಾರೆ. ಅದನ್ನು ಗಮನಿಸಿದ ಅವರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸರು, ವಿಧಿವಿಜ್ಞಾನ ತಂಡದೊಂದಿಗೆ ಸೂಟ್‌ಕೇಸ್ ಒಳಗೆ ಏನಿದೆ ಎಂದು ತೆರೆದು ನೋಡಿದ್ದಾರೆ.
ಈ ವೇಳೆ ಸೂಟ್‌ಕೇಸ್‌ನಲ್ಲಿ ನರ್ವಾಲ್ ರುಂಡವನ್ನು ದೇಹದಿಂದ ಬೇರ್ಪಡಿಸಿ, ಆಕೆಯ ದುಪಟ್ಟಾದಿಂದ ಸುತ್ತಿಟ್ಟಿರುವುದು ಕಂಡು ಬಂದಿದೆ.
ಸಂಪ್ಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿಜೇಂದರ್ ಸಿಂಗ್ ಈ ಬಗ್ಗೆ ಮಾತನಾಡಿ, ಈಗಾಗಲೇ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಸುಳಿವು ಇನ್ನು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ೀ ಮಧ್ಯೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಈ ರೀತಿಯ ಕೊಲೆ ಮತ್ತು ಸೂಟ್‌ಕೇಸ್‌ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿರುವುದು ಅತ್ಯಂತ ದುಃಖಕರ ಮತ್ತು ಆಘಾತ ತಂದಿದೆ ಎಂದು ತಿಳಿಸಿದ್ದಾರೆ.
ಘಟನೆಯಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ಈ ಇಡೀ ಪ್ರಕರಣದ ಬಗ್ಗೆ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಅಪರಾಧಿಗಳಿಗೆ ಸಾಧ್ಯವಾದಷ್ಟು ಬೇಗ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮಹಿಳೆಯರ ಮೇಲೆ ನಡೆಯುವ ಅಪರಾಧ ಕೃತ್ಯಗಳಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡು ಭವಿಷ್ಯದಲ್ಲಿ ಇಂತಹ ಕೃತ್ಯಕ್ಕೆ ಕೈಹಾಕುವವರು ಸಾವಿರ ಬಾರಿ ಯೋಚನೆ ಮಾಡುವಂತಾಗುತ್ತದೆ ಎಂದು ಆಗ್ರಹಿಸಿದ್ದಾರೆ.