- ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಮತ್ತು ಪ್ರಾಣಕ್ಕೆ ಸಂಚಕಾರದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಬೆಂಗಳೂರು: ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣದಲ್ಲಿ ಸಾಕ್ಷಿಗಳಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ ಹಾಕಿದರು, ಜಾಮೀನು ನೀಡಬಹುದು ಎಂದು ಹೇಳಿದರೂ, ಅವರನ್ನು ದುರುದ್ದೇಶಪೂರ್ವಕವಾಗಿ ಜೈಲಿನಲ್ಲಿರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಚು ಮಾಡಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಮತ್ತು ಪ್ರಾಣಕ್ಕೆ ಸಂಚಕಾರ ಮಾಡುತ್ತಿರುವ ವಿರುದ್ಧ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕೇಜ್ರಿವಾಲ್ ಅವರನ್ನು ಜೈಲಿನಲ್ಲೇ ಕೊಲೆ ಮಾಡಲು ಕೂಡ ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಜನ ಬುದ್ದಿ ಕಲಿಸುವ ದಿನ ದೂರವಿಲ್ಲ ಎಂದರು.
ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಹದಗೆಡುತ್ತಿದ್ದರೂ ಅವರು ಚಿಕಿತ್ಸೆ ಪಡೆಯಲು ಅವಕಾಶ ನೀಡದ ಕೇಂದ್ರ ಸರ್ಕಾರ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಕೂಡಲೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕು, ಸೂಕ್ತ ಚಿಕಿತ್ಸೆ ಪಡೆಯಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಶುಗರ್ ಲೆವೆಲ್ ಕಡಿಮೆಯಾಗುತ್ತಿದೆ. ಶುಗರ್ ಪ್ರಮಾಣ 60ಕ್ಕಿಂತ ಕಡಿಮೆಯಾದರೆ ಅದರಿಂದ ಆಘಾತ ಆಗುತ್ತದೆ, ಅದು ಪ್ರಾಣಕ್ಕೆ ಮಾರಕವಾಗುವ ಸಾಧ್ಯತೆ ಕೂಡ ಇದೆ. ಜೈಲಿನ ವೈದ್ಯರ ಪ್ರಕಾರ, ಒಂದೇ ದಿನ ಕೇಜ್ರಿವಾಲ್ ಅವರ ಶುಗರ್ ಲೆವೆಲ್ 60ಕ್ಕಿಂತ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದರು, ಆಮ್ ಆದ್ಮಿ ಪಾರ್ಟಿ ಶಾಸಕರನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡಿದರು ಆದರೆ ಅದು ಆಗಲಿಲ್ಲ. ಜೈಲಿಗೆ ಹಾಕುವ ಬೆದರಿಕೆ ಹಾಕಿದರು, ಆಮ್ ಆದ್ಮಿ ಪಾರ್ಟಿ ನಾಯಕರು ಜೈಲಿನಲ್ಲಿದ್ದರೂ, ಪಕ್ಷದ ನಾಯಕರು, ಕಾರ್ಯಕರ್ತರು ಬಗ್ಗಿಲ್ಲ, ಕೇಜ್ರಿವಾಲ್‌ರನ್ನು ಜೈಲಿಗೆ ಹಾಕಿದೆ ಆಮ್ ಆದ್ಮಿ ಪಾರ್ಟಿ ಕಥೆ ಮುಗಿಯುತ್ತದೆ ಎಂದು ಮೋದಿ ಅಂದುಕೊಂಡಿದ್ದರು ಆದರೆ ಅದು ಕನಸಿನಲ್ಲೂ ಸಾಧ್ಯವಿಲ್ಲ ಎಂದರು.
ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ, ಆದರೆ ಒಂದು ಚಿಕ್ಕ ಪಕ್ಷದ ಮೇಲೆ ಒಂದು ಸರ್ಕಾರ, ಸರ್ಕಾರಿ ಸಂಸ್ಥೆಗಳು ಹಿಂದೆ ಬಿದ್ದಿರುವುದೇಕೆ? ಆಮ್ ಆದ್ಮಿ ಪಾರ್ಟಿಯನ್ನು ಮುಗಿಸಲು ಯೋಜನೆ ಮಾಡಿದ್ದೇಕೆ? ಕೇಜ್ರಿವಾಲ್ ಅವರು ಜನರನ್ನು ಎಚ್ಚರಿಸಿದರು, ರಾಜಕೀಯ ವ್ಯವಸ್ಥೆಯನ್ನು ಬದಲಿಸಿದರು ಇದೇ ಕಾರಣಕ್ಕೆ ಬಿಜೆಪಿ ಕೇಜ್ರಿವಾಲ್ ವಿರುದ್ಧ ದ್ವೇಷ ಕಾರುತ್ತಿದೆ ಎಂದರು.
ಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಾಜಿದ್ ಮಾತನಾಡಿ, ಮುಖ್ಯಮಂತ್ರಿ ಹೇಗಿರಬೇಕು ಎಂದು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದು ಅರವಿಂದ್ ಕೇಜ್ರಿವಾಲ್ ಅವರು. ಆಸ್ಪತ್ರೆ, ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಿದರು. ಅವರ ಜನಪ್ರಿಯತೆ ಹೆಚ್ಚುವುದನ್ನು ಸಹಿಸದೆ ಈ ರೀತಿಯ ಕುತಂತ್ರ ಮಾಡಿ ಅವರನ್ನು ಜೈಲಿನಲ್ಲಿಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನರೇಂದ್ರ ಮೋದಿ ಸರ್ಕಾರ ಬುಡಮೇಲು ಮಾಡಲು ಹೊರಟಿದೆ ಎಂದರು.
ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಮಾತನಾಡಿ, ಕೇಜ್ರಿವಾಲ್ ಅವರಿಗೆ ಸೂಕ್ತ ಚಿಕಿತ್ಸೆ ಸಿಗದಂತೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದು, ಕೂಡಲೇ ಅರವಿಂದ್ ಕೇಜ್ರಿವಾಲ್ ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ,ಸಿಪಿಐಂ ಮುಖಂಡ ಬಸವರಾಜು, ಸಿಪಿಐ ಸಹ ಕಾರ್ಯದರ್ಶಿ ಅಮ್ಜದ್ ಖಾನ್, ಸಿಪಿಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು, ಎಸ್ ಟಿ ಪಿ ಐ ನ ಭಾಸ್ಕರ್ ಪ್ರಸಾದ್, ದಲಿತ ಮುಖಂಡ ಹರಿರಾಮ್ , ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.