NEWSನಮ್ಮಜಿಲ್ಲೆನಮ್ಮರಾಜ್ಯ

ರಾಜಕೀಯ ನಾಯಕರ ಲಾಭಕ್ಕಾಗಿ ಸರ್ಕಾರಿ ಶಾಲೆ, ಆಸ್ಪತ್ರೆಗಳ ಕಡೆಗಣನೆ: ಡಾ. ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಶಾಸಕರು, ಸಚಿವರ ಒಡೆತನದ ಖಾಸಗಿ ಶಾಲೆ, ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ. ಆರೋಗ್ಯ ಸೇವೆಗಾಗಿ 600 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಒಂದೇ ಒಂದು ಮಾತ್ರೆ ಬಂದಿಲ್ಲ. ಜನರು ಹೊರಗಡೆ ದುಬಾರಿ ಬೆಲೆ ಕೊಟ್ಟು ಔಷಧಿ ಖರೀದಿಸುವ ಸ್ಥಿತಿ ಇದೆ. ರಾಜ್ಯದಲ್ಲಿ ಆಸ್ಪತ್ರೆ ಸ್ಥಿತಿ ದುಸ್ತರವಾಗಿದೆ. ಹಣ ಬಿಡುಗಡೆ ಮಾಡಲು ಕಿಕ್‌ಬ್ಯಾಕ್‌ ಆರೋಪ ಇದೆ ಎಂದರು.

ದೆಹಲಿಯಲ್ಲಿನ ಶಾಲೆಗಳು, ಆಸ್ಪತ್ರೆಗಳಲ್ಲಿ ಇಂದು ಬಡವರ ಮಕ್ಕಳಿಗೂ ಉತ್ತಮ ವ್ಯಾಸಂಗ ಸಿಗುತ್ತಿದೆ. ಆಸ್ಪತ್ರೆಗಳಲ್ಲಿ 150 ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಇದರ ಜೊತೆಗೆ ಹಲವು ಯೋಜನೆಗಳು ಉಚಿತವಾಗಿದೆ. ಆದರೆ ಕರ್ನಾಟಕದಲ್ಲಿ ಏನಾಗಿದೆ, ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂದು ನೋಡಿ ಎಂದು ಹೇಳಿದರು.

ಸಿದ್ದರಾಮಯ್ಯನವರ ಕನ್ನಡ ಪ್ರೇಮ ಇಷ್ಟೇನಾ?: ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಪರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯನವರಿಗೆ ಇದರ ಬಗ್ಗೆ ಕಾಳಜಿ ಇಲ್ಲವಾ?. ನಿಮ್ಮ ಶಾಸಕರು, ಸಚಿವರಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನು ಕಡೆಗಣಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸದಸ್ಯರು, ಅಧ್ಯಕ್ಷರು, ಪದಾಧಿಕಾರಿಗಳ ನೇಮಕವಾಗಿಲ್ಲ. ಅಲ್ಲಿ ಹಣ ಇಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಬರುವ ಕಲಾವಿದರಿಗೆ ಸರಿಯಾಗಿ ಹಣ ಕೊಟ್ಟಿಲ್ಲ, ಮೊದಲು ಅವರಿಗೆ ಹಣ ನೀಡಿ ಎಂದರು.

ಜೆಸಿಬಿ ಪಕ್ಷಗಳದ್ದು ಭ್ರಷ್ಟಾಚಾರ, ಕುಟುಂಬ ರಾಜಕಾರಣ: ತಾವು ಭ್ರಷ್ಟಾಚಾರ ವಿರೋಧಿಗಳು ಎಂದು ಬಿಜೆಪಿ ಹೇಳಿಕೊಳ್ಳುತ್ತದೆ, ಆದರೆ ಈಶ್ವರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟರು, ಮಾಡಾಳ್ ವಿರೂಪಾಕ್ಷಪ್ಪನವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿತ್ತು. ಇವೆಲ್ಲಾ ಕಣ್ಮುಂದೆ ಇರುವಾಗ ಪ್ರಧಾನಿ ಮೋದಿಯವರು ಹೇಗೆ ತಾವು ಭ್ರಷ್ಟಾಚಾರ ವಿರೋಧಿಸುವುದಾಗಿ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಆಮ್ ಆದ್ಮಿ ಪಕ್ಷದ ನಾಯಕರ ಮನೆಯಲ್ಲಿ ಒಂದು ರೂಪಾಯಿ ಸಿಕ್ಕಿಲ್ಲ ಅಂದರೂ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿ ಮಟ್ಟ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದೆ. ಇನ್ನು ಜೆಡಿಎಸ್ ಬಗ್ಗೆ ಮಾತನಾಡುವುದೇ ಬೇಡ, ಮನೆಯಲ್ಲಿ ಎಲ್ಲರಿಗೂ ಒಂದೊಂದು ಹುದ್ದೆ ನೀಡಲಾಗಿದೆ, ಜನಸಾಮಾನ್ಯರು ಶಾಸಕರು, ಸಂಸದರು ಆಗಲು ಸಾಧ್ಯವಿಲ್ಲವಾ ಎಂದು ಜನರನ್ನು ಕೇಳುತ್ತೇನೆ ಎಂದರು.

ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು ನಾವು ಭ್ರಷ್ಟಾಚಾರ ಮಾಡಿಲ್ಲ ನೀವು ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿರುವ ಜೆಸಿಬಿ ಪಕ್ಷದ ಬಹುತೇಕ ಶಾಸಕರ ಮೇಲೆ ಭ್ರಷ್ಟಾಚಾರ ಪ್ರಕರಣಗಳಿವೆ, ಕೆಲವೇ ಮಂದಿ ಮಾತ್ರ ಪ್ರಾಮಾಣಿಕರಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಬಹುತೇಕ ಶಾಸಕರು ಜೈಲಿಗೆ ಹೋಗಿ ಬಂದವರಾಗಿದ್ದಾರೆ. ಶಾಸಕರಿಗೆ 700-800 ಕೋಟಿ ರೂಪಾಯಿ ಆಸ್ತಿ ಎಲ್ಲಿಂದ ಬಂತು ಎಂದು ತನಿಖೆ ಮಾಡಿಸಿ ಎಂದು ಪ್ರಧಾನಿ ಮೋದಿಗೆ ಒತ್ತಾಯಿಸಿದರು.

ರಾಜ್ಯದಲ್ಲಿ ಬರ ಬಂದಿದ್ದು ರೈತರು ಸಮಸ್ಯೆಗಳಿಗೆ ಸಿಲುಕಿದ್ದಾರೆ, ರೈತರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ, ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಸರಿಯಾದ ಸಮಯಕ್ಕೆ ಕಾರ್ಖಾನೆಗಳು ಹಣ ನೀಡುತ್ತಿಲ್ಲ. ಪಂಜಾಬ್‌ನಲ್ಲಿ ಕಬ್ಬಿಗೆ 3800 ರೂಪಾಯಿ ಬೆಂಬಲೆ ಬೆಲೆ ನೀಡಲಾಗುತ್ತಿದೆ, ಒಂದೇ ವಾರದಲ್ಲಿ ಹಣ ಸಿಗುತ್ತಿದೆ. ರಾಜ್ಯದಲ್ಲಿ 2,700 ರೂ. ಮಾತ್ರ ಬೆಲೆ ಇದ್ದು, ತೂಕದಲ್ಲಿ ಕೂಡ ಮೋಸ ಮಾಡಲಾಗುತ್ತಿದೆ, ಸರ್ಕಾರವೇ ಸಕ್ಕರೆ ಕಾರ್ಖಾನೆ ಮುಂದೆ ವೇ ಬ್ರಿಡ್ಜ್ ಸ್ಥಾಪಿಸಿ ಎಂದು ಒತ್ತಾಯಿಸಿದರು.

ಅರಳಿಕಟ್ಟೆ ಸಂವಾದ: ನಾವು ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಹೋಗುತ್ತಿದ್ದೇವೆ. ಮೊದಲು ಗ್ರಾಮದ ಸಮಸ್ಯೆಗಳನ್ನು ಚರ್ಚಿಸಲು ಅರಳಿಕಟ್ಟೆ ಸ್ಥಾಪನೆ ಮಾಡಲಾಗಿತ್ತು, ಈಗ ಅದೇ ಕಲ್ಪನೆಯೊಂದಿಗೆ, ಮುಖ್ಯಮಂತ್ರಿ ಚಂದ್ರು ಅವರ ನಾಯಕತ್ವದಲ್ಲಿ ಹಳ್ಳಿಗಳಿಗೆ ಹೋಗಿ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ, ಬುಧವಾರ ಚಿಕ್ಕಮಗಳೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಅರಳಿಕಟ್ಟೆ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಣ್ಣ ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯ ಮುಂದೆ ರೈತರ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಚಂದ್ರು ರವರು ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಹಲವು ತಾಲೂಕುಗಳನ್ನು ಬರಗಾಲ ಘೋಷಣೆ ಮಾಡದೆ ತಾರತಮ್ಯ ಧೋರಣೆ ಅನಿಸರಿಸುತ್ತಿರುವುದು ಸರಿ ಇಲ್ಲ ಎಂದು ಸರ್ಕಾರದ ನಿಲುವನ್ನು ಖಂಡಿಸಿದರು

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ, ತಾಲ್ಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.

ಇದೇ ಸಂದರ್ಭದಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಉಮಾಶಂಕರ್, ರಾಜ್ಯ ಮಾಧ್ಯಮ ಸಂಚಾಲಕ  ಜಗದೀಶ್ ವಿ. ಸದಂ, ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ, ರಾಜ್ಯ ಕಾರ್ಯದರ್ಶಿ ಬಸವರಾಜ ಮುದಿಗೌಡರ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಪಿ. ಈರೇಗೌಡ, ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ. ಸುಂದರ್ ಗೌಡ, ಯುವ ಘಟಕದ ನಿತಿನ್ ಪಾಲ್ ಮತ್ತು ಇತರ ನಾಯಕರು ಇದ್ದರು.

Leave a Reply

error: Content is protected !!
LATEST
ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ