ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಗರದಲ್ಲಿ ನಿರಂತರವಾಗಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿ ತ್ವರಿತವಾಗಿ ಪ್ರಕರಣಗಳನ್ನು ಟ್ರ್ಯಾಕ್ ಮಾಡಿ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಇಂದು ಕೋವಿಡ್ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ಸಭೆ ಬಳಿಕ ಮಾತನಾಡಿದರು.
ಈ ಹಿಂದೆ ಪ್ರತಿನಿತ್ಯ 6,000 ಇದ್ದ ಪ್ರಕರಣಗಳು ಇದೀಗ 300 ರಿಂದ 400 ಪ್ರಕರಣಗಳು ಮಾತ್ರ ಕಂಡುಬರುತ್ತಿವೆ. ಅದರಂತೆ ಪಾಸಿಟಿವಿಟಿ ರೇಟ್ ಶೇ. 0.97, ರಿಕವರಿ ರೇಟ್ ಶೇ. 97.80, ಡೆತ್ ರೇಟ್ ಶೇ. O.70 ಇದೆ ಎಂದು ತಿಳಿಸಿದರು.
ನಗರದಲ್ಲಿ ನಿತ್ಯ 60,000 ಕೋವಿಡ್ ಪರೀಕ್ಷೆಗಳನ್ನು ಮಾಡುತ್ತಿದ್ದ ಪರಿಣಾಮ ಕೋವಿಡ್ ಪ್ರಕರಣಗಳನ್ನು ನಗರದಲ್ಲಿ ತಡೆಯಲು ಸಾಧ್ಯವಾಗಿದೆ. ಇದೇ ರೀತಿ ಪ್ರತಿನಿತ್ಯ ಹೆಚ್ಚು ಹೆಚ್ಚು ಪರೀಕ್ಷೆ ಮಾಡುವುದರಿಂದ ಕೋವಿಡ್ ಪ್ರಕರಣಗಳನ್ನು ಇನ್ನೂ ಕಡಿಮೆ ಮಾಡಬಹುದಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲನೇ ಹಂತದಲ್ಲಿ 1,83,567 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ (ದಿ:26.01.2021) 47,528(ಶೇ.25.89) ಮಂದಿ ಲಸಿಕೆ ಪಡೆದಿದ್ದಾರೆ. ಇಂದು ಕೂಡಾ 20,000 ಫಲಾನುಭವಿಗಳಿಗೆ ನೀಡುವ ಗುರಿ ಹೊಂದಲಾಗಿದೆ. ಪ್ರತಿನಿತ್ಯ 15,000 ರಿಂದ 20,000 ಫಲಾನುಭವಿಗಳಿಗೆ ಲಸಿಕೆ ನೀಡಲು ಕ್ರಮವಹಿಸಿದರೆ ಇನ್ನು 10 ರಿಂದ 15 ದಿನಗಳಲ್ಲಿ ಉಳಿದೆಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬಹುದಾಗಿದೆ. ಆದರೆ, ಕೆಲವರು ಹಲವು ಕಾರಣಾಂತರಗಳಿಂದ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಪಡೆಯಲು ಮುಂದೆಬಾರದವರಿಗೆ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೋವಿಡ್ ವೇಳೆ ಫ್ರಂಟ್ ಲೈನ್ ವಕರ್ಸ್ ಆಗಿ ಕೆಲಸ ಮಾಡಿದವರಿಗೆ 2ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಪಾಲಿಕೆ ಸಿಬ್ಬಂದಿ, ಜಲಮಂಡಳಿ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಸೇರಿ ಸುಮಾರು 50,000 ಮಂದಿ ಫಲಾನುಭವಿಗಳು ಲಭ್ಯವಾಗಿದ್ದು, ಈಗಾಗಲೇ ಪೋರ್ಟಲ್‌ನಲ್ಲಿ ಬಹುತೇಕ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದರು.
ಇನ್ನು ಪ್ರಮುಖವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 3ನೇ ಹಂತದಲ್ಲಿ ಲಸಿಕೆ ಪಡೆಯುವ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಬೇಕಿದೆ. ಈ ಸಂಬಂಧ ನಗರದಾದ್ಯಂತ ಸಮೀಕ್ಷೆ ನಡೆಸಿ ಮಾರ್ಚ್ ಅಂತ್ಯದೊಳಗೆ ಫಲಾನಭವಿಗಳ ಪಟ್ಟಿ ಸಿದ್ದಪಡಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಸುಮಾರು 500 ಕೊಳಗೇರಿ ಪ್ರದೇಶಗಳಿದ್ದು, ಪ್ರಮುಖವಾಗಿ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಪಟ್ಟಿ ಸಿದ್ದಪಡಿಬೇಕು ಹಾಗೂ ಸಿದ್ದಪಡಿಸಿದ ಪಟ್ಟಿ ಆಧಾರದ ಮೇಲೆ ಲಸಿಕೆ ನೀಡಲು ವೇಳಾಪಟ್ಟಿ ತಯಾರಿಸಿಕೊಳ್ಳಬೇಕು.
ಈ ಸಂಬಂಧ ಆಶಾ ಕಾರ್ಯಕರ್ತರು ಹಾಗೂ ಎ.ಎನ್.ಎಂಗಳು ನಡೆಸಿದ ಸರ್ವೇ ಮೂಲಕ ಸಂಗ್ರಹಿದ ದತ್ತಾಂಶವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪೋರ್ಟಲ್‌ನ “ನಮ್ಮ ಸಮುದಾಯ ತಂತ್ರಾಂಶ” ದಲ್ಲಿ ಸರ್ವೇ ನಡೆಸಿರುವ ಪಟ್ಟಿಯನ್ನು ಅಪ್ಲೋಡ್ ಮಾಡಬೇಕು. ಸರ್ವೇ ಮಾಡಲು ಎನ್.ಜಿ.ಒಗಳ ಸಹಕಾರವೂ ಪಡೆದುಕೊಳ್ಳಬೇಕು. ಈ ಸಂಬಂಧ ಕೂಡಲೆ ಎನ್.ಜಿ.ಒಗಳ ಜತೆ ಒಂದು ಸಭೆ ನಡೆಸಬೇಕು. ಈ ಮೂಲಕ ಮಾರ್ಚ್ ಅಂತ್ಯದ ವೇಳೆಗೆ 3ನೇ ಹಂತದಲ್ಲಿ ಲಸಿಕೆ ಪಡೆಯುವ ಸಂಪೂರ್ಣ ಪಟ್ಟಿಯನ್ನು ಸಿದ್ದಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಲ್ಸ್ ಪೋಲಿಯೋ ಲಸಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಜನವರಿ 31 ರಿಂದ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ. ನಗರದಲ್ಲಿ 1,04,39,633 ಜನಸಂಖ್ಯೆಯಲ್ಲಿ 10,79,218 ರಷ್ಟು 0 ರಿಂದ 5 ವರ್ಷದ ಮಕ್ಕಳಿದ್ದಾರೆ. ಈ ಪೈಕಿ 3,340 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 456 ಟ್ರಾನ್ಸಿಟ್ ತಂಡ ಹಾಗೂ 324 ಮೊಬೈಲ್ ತಂಡಗಳಿವೆ. ಲಸಿಕೆ ನೀಡಲು 14,922 ಲಸಿಕೆ ನೀಡುವವರು, 749 ಮೇಲ್ವಿಚಾರಕರು ಇರಲಿದ್ದಾರೆ.
ಜನವರಿ 31 ರಿಂದ ಫೆಬ್ರವರಿ 3ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು, ಪಲ್ಸ್ ಪೋಲಿಯೋ ನಡೆಯುವ ವೇಳೆ ಕೋವಿಡ್ ವ್ಯಾಕ್ಸಿನ್ (ಜನವರಿ 31 ರಿಂದ ಫೆಬ್ರವರಿ 3 ರವರೆಗೆ) ಇರುವುದಿಲ್ಲ. ಕೋವಿಡ್ ಇರುವುದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಲಸಿಕೆ ನೀಡಲಾಗುವುದು. ಪಲ್ಸ್ ಪೊಲೀಯೋ ಲಸಿಕೆ ನೀಡುವ ಬಗ್ಗೆ ರೇಡಿಯೋ, ಜಿಂಗಲ್ಸ್ ಮೂಲಕ ಜಾಗೃತಿ ಮೂಡಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತ ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.