ಬಾಗಲಕೋಟೆ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರ ಪತ್ನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮರಿಬಸಮ್ಮ ಕಂಠಿ (103) ಇಂದು ನಿಧನರಾದರು.
ಹತ್ತು ವಿವಿಧ ಭಾಷೆಗಳಲ್ಲಿ ಸರಾಗವಾಗಿ ಮಾತನಾಡುತ್ತಿದ್ದರು. ಮಾಜಿ ಸಿಎಂ ಎಸ್.ಆರ್. ಕಂಠಿ ಬೆಳಗಾವಿಯ ಕಿತ್ತೂರಿನಲ್ಲಿ ಸ್ಥಾಪಿಸಿರುವ ಸೈನಿಕ ಶಾಲೆಯಲ್ಲಿ ಮಗನೊಂದಿಗೆ ವಾಸವಿದ್ದ ಮರಿಬಸಮ್ಮ ವಯೋಸಹಜ ಕಾಯಿಕೆಯಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಮರಿಬಸಮ್ಮ ಅವರಿಗೆ ಇಬ್ಬರು ಪುತ್ರರು. ಒಬ್ಬ ಪುತ್ರ ಈ ಹಿಂದೆಯೇ ನಿಧನವಾಗಿದ್ದರೆ ಇನ್ನೊಬ್ಬರು ಮಹೇಂದ್ರ ಕಂಠಿ ಸೈನಿಕ ಶಾಲೆ ಚೇರ್ ಮನ್ ಆಗಿದ್ದಾರೆ.
ಮರಿಬಸಮ್ಮ ಅವರ ಪಾರ್ಥಿವ ಶರೀರವನ್ನು ಸೈನಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ನಂತರ ಇಂದು ಸಂಜೆ ಬಾಗಲಕೋಟೆಯ ಇಳಕಲ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಎಸ್ ಆರ್ ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ )ಯವರು ಬಾಗಲಕೋಟ (ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದವರು. 1962ರ 14 ಮಾರ್ಚ್ ನಿಂದ 20 ಜೂನ್ ವರೆಗೆ ಬಿ.ಡಿ.ಜತ್ತಿಯವರ ನಂತರ ಅಲ್ಪಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಇವರು ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದು ರಾಜ್ಯ ವಿಧಾನಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ನಿಧನ ಹೊಂದಿದರು.