ರಾಮನಗರ: ಆಹಾರ ಹರಸಿ ಜಾಲಮಂಗಲ ಗ್ರಾಮಕ್ಕೆ ಲಗ್ಗೆಯಿಟ್ಟ ಗ್ರಾಮದ ಮನೆಯೊಂದರಲ್ಲಿ ಅಡಗಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ತಾಲೂಕಿನ ಜಾಲಮಂಗಲ ಗ್ರಾಮಕ್ಕೆ ತಡರಾತ್ರಿ ಆಹಾರ ಅರಸಿ ಬಂದ ಚಿರತೆ ಗ್ರಾಮದ ರೇವಣ್ಣ ಎಂಬುವರ ಮನೆಗೆ ನುಗ್ಗಿತ್ತು. ಮನೆ ಒಳಗೆ ಹೋದ ಚಿರತೆ ಗಮನಿಸಿದ ಮನೆಯವರು ಮನೆ ಬಾಗಿಲು ಮುಚ್ಚಿ ಚಿರತೆಯನ್ನು ಮನೆಯೊಳಗೆ ಸೆರೆಯಾಗಿಸಿದರು.
ಗ್ರಾಮದಲ್ಲಿ ರೇವಣ್ಣ ಅವರು ನೂತನವಾಗಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು ಮಹಡಿ ಮೊದಲ ಮನೆ ಶೇ.95 ರಷ್ಟು ಕೆಲಸ ಕೂಡ ಮುಗಿದಿದೆ. ಆದರೆ ಮನೆಯ ಬಾಗಿಲನ್ನು ರೇವಣ್ಣ ಅವರು ಹಾಕಿರಲಿಲ್ಲ ಹಾಗಾಗಿ ಚಿರತೆ ಮನೆಯೊಳಗೆ ಹೊಕ್ಕಿತ್ತು.
ಮನೆಯೊಳಗೆ ಚಿರತೆ ಹೋಗಿದ್ದನ್ನು ಗಮನಿಸಿದ ಮನೆಯವರು ಮನೆಯ ಬಾಗಿಲನ್ನು ಮುಚ್ಚಿ ಚಿರತೆ ಹೊರ ಬಾರದಂತೆ ಭದ್ರಪಡಿಸಿದ್ದಾರೆ. ನಂತರ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ವಹಿಸಿದರು.
ಇತ್ತ ಬನ್ನೇರುಘಟ್ಟದ ಅರವಳಿಕೆ ವೈದ್ಯರಿಗೂ ವಿಷಯ ಮುಟ್ಟಿಸಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಬನ್ನೇರುಘಟ್ಟದಿಂದ ಬಂದ ಅರವಳಿಕೆ ತಜ್ಞ ಡಾ. ಉಮಾಶಂಕರ್ ಮನೆಯ ಕಿಟಕಿಯಿಂದ ಚಿರತೆಗೆ ಅರವಳಿಕೆ ನೀಡಿದ್ದರು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಳಸಿ ಚಿರತೆಯನ್ನು ಹಿಡಿದು ಬೋನಿನಲ್ಲಿ ಬಂಧಿಸಿದರು. ಇನ್ನು ಚಿರತೆ ಆರೋಗ್ಯವಾಗಿದೆ, 5 ವರ್ಷದ ಹೆಣ್ಣು ಚಿರತೆಯಾಗಿದೆ ಎಂದು ಡಾ. ಉಮಾಶಂಕರ್ ತಿಳಿಸಿದರು.
ಇನ್ನು ಸೆರೆಯಿಡಿದ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ದೇಶನ ಪಡೆದು ರಾಷ್ಟ್ರೀಯ ಸಂರಕ್ಷಿತ ಅರಣ್ಯದಲ್ಲಿ ಬಿಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬೋನ್ ಅಳವಡಿಸಿ ಚಿರತೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಡಿಎಫ್ಒ ದೇವಾರಾಜ್ ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಚಿರತೆಗಳ ಉಪಟಳ ಜಾಸ್ತಿಯಾಗಿದೆ. ಜಾಲಮಂಗಲ ಗ್ರಾಮದಲ್ಲಿ ಈಗಾಗಲೇ ಮೂರು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಗ್ರಾಮದ ಸಮೀಪದ ಅರಣ್ಯದಲ್ಲಿ ಚಿರತೆಗಳು ಸಾಕಷ್ಟಿವೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಎಚ್ಚೆತ್ತುಕೊಳ್ಳಬೇಕಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಹೇಳಿದ್ದಾರೆ.