ವಿಜಯಪಥ ಸಮಗ್ರ ಸುದ್ದಿ
ಉತ್ತರ ಪ್ರದೇಶ: ಇಲ್ಲಿನ ಬಾಂದ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ವರ್ದ ಮಗುವನ್ನು23 ವರ್ಷದ ಕಾಮುಕನೊಬ್ಬ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.
ಗಿರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾಗಿರುವ ಹೆಣ್ಣುಮಗುವಿನ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ನೀಡಲು ಆಕೆಯನ್ನು ಕಾನ್ಪುರದ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಇನ್ನು ಮಗುವಿಗೆ ಭಾರಿ ರಕ್ತಸ್ರಾವ ಆಗುತ್ತಿದ್ದ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಉದಯ್ ಭಾನ್ ಸಿಂಗ್ ಹೇಳಿದ್ದಾರೆ.
ಮಗುವಿಗೆ 10 ರೂಪಾಯಿ ನೀಡಿ ಆಮಿಷ ತೋರಿದ ಆರೋಪಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ನರೇನಿ ಸಿಯಾರಾಮ್ ತಿಳಿಸಿದ್ದಾರೆ.
ಘಟನೆಯ ಕುರಿತು ದೂರು ನೀಡಲು ಮಗುವಿನ ಮನೆಯವರು ಆರೋಪಿಯ ಮನೆಗೆ ತೆರಳಿದ ವೇಳೆ ಆರೋಪಿಯ ಪರವಾಗಿಯೇ ನಿಂತು ಮಗುವಿನ ಮನೆಯವರಿಗೇ ಜೀವಬೆದರಿಕೆ ಹಾಕಲಾಗಿದೆ.
ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿ ಸೇರಿ ಬೆದರಿಕೆ ಹಾಕಿದ್ದ ಕುಟುಂಬದ ಮೂವರು ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ನರೇನಿ ತಿಳಿಸಿದ್ದಾರೆ.
ಇನ್ನು ಹಳ್ಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಹೇಳಿದ್ದಾರೆ.