ಹಾಸನ: ಮನೆಯಲ್ಲಿ ಕೂತು ಬೋರ್ ಆಗುತ್ತಿದೆ ಆದ್ದರಿಂದ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರುತ್ತೇವೆ ಎಂದು ಹೇಳಿ ಹೋದ ನವದಂಪತಿಯ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27), ಹೆನ್ನಲಿ ಗ್ರಾಮದ ಕೃತಿಕಾ (23) ಮೃತ ನವ ದಂಪತಿ. ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮ ಮುರಹಳ್ಳಿಗೆ ಕೆಲವು ದಿನಗಳ ಹಿಂದಷ್ಟೆ ಬಂದಿದ್ದ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ಪತ್ನಿ ಕೃತಿಕಾ ಮನೆಗೆ ಹೋಗಿದ್ದ. ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆ ಎಂದು ಬೈಕ್‍ನಲ್ಲಿ ಹೊರ ಹೋಗಿದ್ದರು. ಆದರೆ ಸಂಜೆ ಆದರೂ ಮನೆಗೆ ವಾಪಸ್ ಬರಲಿಲ್ಲವಲ್ಲ ಎಂದು ಮನೆಯವರು ಫೋನ್ ಮಾಡಿದ್ದಾರೆ. ಈ ವೇಳೆ ಇಬ್ಬರ ಮೊಬೈಲ್ ಫೋನ್‌ಗಳು ಸ್ಬಿಚ್ ಆಫ್ ಆಗಿದ್ದವು. ಗಾಬರಿಗೊಂಡ ಮನೆಯವರು ಅವರನ್ನು ಹುಡುಕಲು ಮುಂದಾಗಿ ಹೇಮಾವತಿ ನದಿ ಸಮೀಪ ಬಂದಿದ್ದಾರೆ. ಈ ವೇಳೆ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದು ಕಾಣಿಸಿದೆ.
ಬೈಕ್ ನಿಲ್ಲಿಸಿದ್ದರಿಂದ ನದಿ ದಡದ ಬಳಿಗೆ ಹೋಗಿ ನೋಡಿದ್ದಾರೆ. ಆ ವೇಳೆ ನದಿಯಲ್ಲಿ ಮೀನುಗಾರರು ಹಾಕಿದ್ದ ಬಲೆಗೆ ಕೃತಿಕಾ, ಅರ್ಥೇಶ್ ಮೃತದೇಹ ಸಿಕ್ಕಿಕೊಂಡಿದ್ದು ಪತ್ತೆಯಾಗಿದೆ. ಆದರೆ ಈ ನವದಂಪತಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ನದಿಯ ಬಳಿ ಸೆಲ್ಫಿ ತೆಗೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆ ಇಲ್ಲ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ತಿಳಿಯ ಬೇಕಿದೆ.
ಸ್ಥಳದಲ್ಲಿ ನವದಂಪತಿ ಶವವಾಗಿ ಬಿದ್ದಿರುವುದನ್ನು ನೋಡಿದ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟುವಂತಿತ್ತು.
ವಿಷಯ ತಿಳಿದ ಸಕಲೇಶಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
RIP