ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತೆ ಬಯಲಾಗಿದೆ, ಸಚಿವರೇ ನಿಮ್ಮ ಆಪ್ತ ಸಹಾಯಕ ಅಧಿಕಾರಿಯ ಬಳಿ ಲಂಚ ಕೇಳಿರುವ ಆರೋಪದ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿ ರಾಜ್ಯದ ಅಭ್ಯುದಯದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಕೇವಲ ಹಗರಣದಲ್ಲೇ ಕಾಲ ಕಾಳೆಯುತ್ತಿದೆ, ಸಾವಿರಾರು ಕೋಟಿ ಜನ ಸಾಮಾನ್ಯರ ಹಣವನ್ನು ನುಂಗಿ ನೀರು ಕುಡಿಯುತ್ತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳ ಹಗರಣಗಳ ಬಗ್ಗೆ ಕಿಂಚಿತ್ತೂ ಮಾತನಾಡದ ಯಡಿಯೂರಪ್ಪ ಅವರು ಈ ರಾಜ್ಯ ಕಂಡ ಅಸಮರ್ಥ, ಅತಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದರು.
ಮೊದಲ ಬಾರಿ ಬಿಜೆಪಿ ಸರ್ಕಾರ ರಚಿಸಿದಾಗ ಸಾರಿಗೆ ಸಚಿವರಾಗಿ ಅಧಿಕಾರ ಅನುಭವಿಸಿದ ಆರ್.ಅಶೋಕ್ ಲಾಭದಲ್ಲಿ ಇದ್ದ ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಲೂಟಿ ಮಾಡಿದ ಪರಿಣಾಮ ಇಂದು ಸಂಬಳ ಕೊಡದ ಸ್ಥಿತಿಗೆ ತಲುಪಿದೆ. ಭೂ ಕಳಬಳಿಕೆ ಹಿನ್ನೆಲೆ 13 ಸಾವಿರ ಪ್ರಕರಣಗಳು ಹೈಕೋರ್ಟಿನಲ್ಲಿ ಬಾಕಿ ಇರುವಾಗಲೇ ಸರ್ಕಾರದ ಮೇಲೆ ಒತ್ತಡ ತಂದು 79 ಎ, ಬಿ ಕಾಯ್ದೆ ತಿದ್ದುಪಡಿ ಮಾಡಿಸಿ ಭೂಗಳ್ಳರ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ನೇರಾನೇರ ಹಣದ ಲೂಟಿಗೆ ಇಳಿದಿರುವ ಆರ್.ಅಶೋಕ್ ಅವರ ರಾಜೀನಾಮೆಗೆ ಒತ್ತಾಯಿಸಿ ಇದೇ ಸೋಮವಾರ (ಫೆ.1) ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಸಚಿವರ ಸರ್ಕಾರಿ ನಿವಾಸದ ತನಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ 1997, 1999, 2004 ರಿಂದ 3 ಬಾರಿ ಹಾಗೂ ಪದ್ಮನಾಭನಗರವನ್ನು 3 ಬಾರಿ ಒಟ್ಟು 6 ಬಾರಿ ಪ್ರತಿನಿಧಿಸಿ ಶಾಸಕರಾಗಿದ್ದ ಆರ್.ಅಶೋಕ್ ಅವರು ಸರ್ಕಾರಿ ಜಾಗಗಳನ್ನು ರಕ್ಷಿಸುವ ಬದಲು ಹೊಸಕೆರೆಹಳ್ಳಿ, ಗೌಡಯ್ಯನ ಕೆರೆ, ಚಿಕ್ಕಲ್ಲಸಂದ್ರ ಕೆರೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ರಾಜಕಾಲುವೆ, ಕೆರೆ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮ ಬಡಾವಣೆಗಳನ್ನು ನಿರ್ಮಿಸುವವರಿಗೆ ಬೆನ್ನೆಲುಬಾಗಿ ನಿಂತು ಅಮಾಯಕ ಜನಗಳಿಗೆ ಮೋಸ ಮಾಡಿದ ಪಾಪ ಇವರ ಮೇಲಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ಎಕರೆ ಕಂದಾಯ ಭೂಮಿ ಪ್ರಭಾವಿಗಳ ಪಾಲಾಗುತ್ತಿದ್ದರೂ ಕಿಂಚಿತ್ತೂ ಕ್ರಮವಹಿಸದೇ ತನ್ನ ಆಪ್ತರ ಮೂಲಕ ಕೊಳ್ಳೆ ಹೊಡೆಯುತ್ತಿರುವ ಆರ್.ಅಶೋಕ್ ಅವರು ನಾಲಾಯಕ್ ಸಚಿವರು ಎಂದು ಆಕ್ರೋಶ ವ್ಯಕ್ತಪಡಿಸಿದರು.