ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಎರಡು ವರ್ಷದಲ್ಲಿ ಮೂರು ಸಕ್ಕರೆ ಸಚಿವರು ಬದಲಾಗಿದ್ದಾರೆ. ರಾಜ್ಯದ 67 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 4000 ಕೋಟಿ ರೂ. ಬಾಕಿ ಬರಬೇಕಿದೆ. ಈ ನಡುವೆ ರೈತರ ಬಗ್ಗೆ ಸರಕಾರದ ನಿರ್ಲಕ್ಷ ಧೋರಣೆ ಮುಂದುವರಿದಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ಅವೈಜ್ಞಾನಿಕ ನೀತಿಗಳಿಂದ ಸಮಸ್ಯೆ ಹೆಚ್ಚಾಗುತ್ತಿದ್ದು ಅವೆಲ್ಲವುಗಳನ್ನು ಸರ್ಕಾರ ಪರಿಹರಿಸಬೇಕು. ಕೃಷಿ ಕಾಯ್ದೆ ವಿಚಾರದಲ್ಲಿ ಪ್ರಧಾನಿ ರೈತರ ಸಭೆ ಕರೆಯಬೇಕು ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಾರ್ಚ್ 20ರಂದು ಶಿವಮೊಗ್ಗದಲ್ಲಿ ಸಮಾವೇಶ
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯದ ರೈತರಿಗೆ ಅರಿವು ಮೂಡಿಸಲು ಮಾರ್ಚ್ 20ರಂದು ಶಿವಮೊಗ್ಗದ ವಿಜ್ಞಾನ ಕಾಲೇಜು ಮೈದಾನದಲ್ಲಿ ಕಿಸಾನ್ ಮಹಾ ಪಂಚಾಯತ್ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಗರದ ಮೌರ್ಯ ವೃತ್ತದಿಂದ ಬೆಳಗ್ಗೆ 7 ಗಂಟೆಗೆ ವಾಹನದಲ್ಲಿ ರ್ಯಾಲಿ ಹೊರಟು ಮಧ್ಯಾಹ್ನ 3ಕ್ಕೆ ಶಿವಮೊಗ್ಗದಲ್ಲಿ ಸಭೆ ನಡೆಸಲಾಗುವುದು. ಇದರಲ್ಲಿ ರೈತ ಸಂಘಟನೆಗಳ ರಾಷ್ಟ್ರೀಯ ಮುಖಂಡರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ.ದರ್ಶನ್ ಪಾಲ್ , ಕಿಸಾನ್ ರಾಷ್ಟ್ರೀಯ ಮುಖಂಡರು, ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸಭೆಗೆ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ದೆಹಲಿಯಲ್ಲಿ ಕೃಷಿ ಕಾಯ್ದೆಗಳ ಹೋರಾಟದಲ್ಲಿ ಮಡಿದ 275 ರೈತರಿಗೆ ಗೌರವ ಸಲ್ಲಿಸಲು ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣ ದಲ್ಲಿ ಮಾರ್ಚ್ 19ರಂದು ಶ್ರದ್ಧಾಂಜಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಮುಖಂಡರಾದ ಪಂಜಾಬ್ನ ಜಗಜಿತ್ ಸಿಂಗ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕಂಜಿ, ಹರಿಯಾಣದ ಅಭಿಮನ್ಯು, ಕೇರಳದ ಕೆ.ವೈ.ಬಿಜು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.