ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಜಿಲ್ಲೆಯ ಕಮಲಾಪೂರ ತಾಲೂಕಿನ ಮುದ್ದಡಗಾದ ಯುವ ರೈತ ಗುರುರಾಜ ಧನ್ನೂರ ಅವರು ತಮ್ಮ ಹೊಲದಲ್ಲಿ ಬೆಳೆಯಲಾದ ಈರುಳ್ಳಿ ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಕಂಗಾಲಾಗಿರುವ ಕುರಿತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಕೂಡಲೆ ಸಂಸದ ಉಮೇಶ ಜಾಧವ ಮತ್ತು ಕಲಬುರಗಿ ಗ್ರಾಮೀಣ ಬಸವರಾಜ ಮತ್ತಿಮೂಡ ಅವರು ಮುದ್ದಡಗಾದ ರೈತನ ಹೊಲಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸಬ್ಸಿಡಿ ದರದಲ್ಲಿ ಈರುಳ್ಳಿ ಶೇಖರಣೆ ಘಟಕ ನಿರ್ಮಿಸಲು ರೈತನಿಗೆ ಆದೇಶ ಪತ್ರ ನೀಡಿದರು.
ಇದಲ್ಲದೆ ಅಕಾಲಿಕ ಆನೆಕಲ್ಲು ಮಳೆ ಬಂದರೆ ಈರುಳ್ಳಿ ಕಾಪಾಡಲು ಕೃಷಿ ಇಲಾಖೆಯಿಂದ ಎರಡು ತಾಡಪತ್ರಿಯನ್ನು ನೀಡಲಾಯಿತು. ರೈತನಿಗೆ ಈರುಳ್ಳಿ ಖರೀದಿದಾರರ ಮೊಬೈಲ್ ಸಂಖ್ಯೆ ನೀಡಿ ಮಾರುಕಟ್ಟೆಯ ಲಿಂಕ್ ಸೌಲಭ್ಯ ಒದಗಿಸಲಾಯಿತು.
ಈರುಳ್ಳಿಯನ್ನು ವೇರ್ ಹೌಸನಲ್ಲಿಟ್ಟು ಬಾಂಡ್ ಪಡೆದು ಅದನ್ನು ಬ್ಯಾಂಕಿಗೆ ನೀಡಿ ಹಣಕಾಸಿನ ನೆರವು ಸಹ ಒದಗಿಸುವುದಾಗಿ ಸಂಸದ-ಶಾಸಕರು ರೈತನಿಗೆ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮುಖಂಡ ಹರ್ಷಾ ಸಲಗರ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ, ಕಲಬುರಗಿ ತೋಟಗಾರಿಕೆ ಉಪ ನಿರ್ದೇಶಕರು, ಆಳಂದ ತಾಲೂಕಿನ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ತಾಲೂಕು ಅಧಿಕಾರಿಗಳು ಇದ್ದರು.