ವಿಜಯಪಥ ಸಮಗ್ರ ಸುದ್ದಿ
ಬೀದರ: ಭಾರತಿಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ , ಹೈದ್ರಾಬಾದ್ ಹಾಗೂ ಹುಲಸೂರು ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೋಡ್ಯುಸರ್ ಕಂಪನಿ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯ ಬೆಳೆಗಳಾದ ನವಣೆ, ಸಾಮೆ ಹಾಗೂ ರಾಗಿಯ ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇಚ್ಚೆಯುಳ್ಳ ರೈತರು ತಮ್ಮ ಹೆಸರನ್ನು ನೋಂದಾಯಿಸಲು ತಿಳಿಸಲಾಗಿದೆ.
ಈಗಾಗಲೇ ತಿಳಿದಿರುವ ಹಾಗೆ ಸಿರಿಧಾನ್ಯ ಸಂರಕ್ಷಣಾ ಉಪಕರಣಗಳು ಹುಲಸೂರು ಗ್ರಾಮ ತಲುಪಿದ್ದು ಸಂಸ್ಕರಣಾ ಘಟಕವನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತಿದ್ದು ರೈತರು ತಾವು ಬೆಳೆದ ಬೆಳೆಯನ್ನು ಈ ಘಟಕದ ಮೂಲಕ ಸಂಸ್ಕರಿಸಿ, ಸಿರಿಧಾನ್ಯ ಅಕ್ಕಿ ರೂಪದಲ್ಲಿ ಸೇವನೆ ಮಾಡಬಹುದು. ಪ್ರಯುಕ್ತ ಎಲ್ಲಾ ರೈತ ಬಾಂಧವರು ಸಿರಿಧಾನ್ಯ ಬಿತ್ತನೆ ಮಾಡುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸಿರಿಧಾನ್ಯಗಳು ಎಂದರೆ ನವಣೆ, ಸಾಮೆ, ಊದಲು, ಹಾರಕ, ಕೊರಲೆ, ಬರಗು, ಜೋಳ,ರಾಗಿ ಮತ್ತು ಸಜ್ಜೆ. ಇವುಗಳು ಸಣ್ಣ ಬೀಜಗಳ ರೂಪದ ಧಾನ್ಯಗಳಾಗಿದ್ದು,ಕರ್ನಾಟಕ ರಾಜ್ಯದ ಸಾಂಪ್ರಾದಾಯಿಕ ಆಹಾರವಾಗಿದ್ದವು. ಪಾಶ್ಚಿಮಾತ್ಯ ಆಹಾರದ ಜನಪ್ರಿಯತೆಯಿಂದ ಹಾಗೂ ವಾಣಿಜ್ಯ ಬೆಳೆಗಳ ಹಾವಳಿಯಿಂದ ಈ ಆಹಾರ ಧಾನ್ಯಗಳ ಬಳಕೆ ಕಡಿಮೆಯಾಗಿರುತ್ತದೆ. ಸಿರಿಧಾನ್ಯಗಳು ಒಣ ಬೇಸಾಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಬೆಳೆಯುವ ಬೆಳೆಗಳಾಗಿದ್ದು, ಕಡಿಮೆ ಫಲವತ್ತಾದ ಮಣ್ಣಿನಲ್ಲಿಯೂ ಸಹ ಸಮೃದ್ಧಿಯಾಗಿ ಬೆಳೆದು ರೈತನಿಗೆ ಆದಾಯತರಬಲ್ಲ ಬೆಳೆಯಾಗಿರುತ್ತವೆ.
ಈ ಬೆಳೆಗಳು ಅರೆ-ಒಣ ಪ್ರದೇಶದ ರೈತರಿಗೆ ಮುಖ್ಯ ಆಹಾರ ಮತ್ತು ಆದಾಯದ ಮೂಲವಾಗಿವೆ. ಸಿರಿಧಾನ್ಯಗಳನ್ನು ಕಡಿಮೆ ನೀರು ಉಪಯೋಗಿಸಿ ಬರಡು ಭೂಮಿಯಲ್ಲಿ ಸಹಜವಾಗಿ ಬೆಳೆಯಬಹುದು. ಇವುಗಳನ್ನು ಬರಗಾಲದ ಮಿತ್ರ ಎಂದು ಕರೆಯುತ್ತಾರೆ.
ಸಿರಿಧಾನ್ಯಗಳು ಮಾನವನ ದೇಹಕ್ಕೆ ಬೇಕಾಗುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಸಿರಿಧಾನ್ಯಗಳು ಹೆಚ್ಚಿನ ಶರ್ಕರ ಪಿಷ್ಟ, ಪ್ರೋಟಿನ, ನಾರಿನಾಂಶ (ಫೈಬರ್) ಮತ್ತು ಕೊಬ್ಬು ಹೊಂದಿರುತ್ತದೆ. ಆದುದರಿಂದ ವಿಶಿಷ್ಟವಾದ ಪೋಷಕಾಂಶಗಳನ್ನು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯವಾಗುತ್ತವೆ.
ಸಿರಿಧಾನ್ಯಗಳ ಸೇವನೆಯಿಂದ ನವಣೆ–(ಬಿಪಿ,ಶುಗರ್,ಶಕ್ತಿ ವರ್ಧನೆ), ಹಾರಕ-(ರಕ್ತ ಶುದ್ಧೀಕರಣ,ಮೂಳೆ ಬೆಳವಣಿಗೆ), ಸಾಮೆ-(ಬಂಜೆತನ ನಿವಾರಣೆ,ಅಂಡಾಣು ಮತ್ತು ವಿರ್ಯಾಣುಗಳ ಅಭಿವೃದ್ಧಿ, ಉಷ್ಣ ನಿಯಂತ್ರಣ), ಬರಗು-(ಕೊಲೆಸ್ಥ್ರಾಲ್ ತಗ್ಗಿಸುವುದು, ತ್ವಚೆ ಹೊಳಪು ಹಾಗು ಚರ್ಮರೋಗ), ಊದಲು-(ಲಿವರ್,ಥೈರಾಯ್ಡ್,ಕಿಡ್ನಿ ಹಾಗು ಲೈಂಗಿಕ ಸಮಸ್ಯೆ).
ಕೊರಲೆ-(ಮಲಬದ್ಧತೆ, ಜಿರ್ಣಕ್ರೀಯೆ ಹಾಗು ನರದೌರ್ಬಲ್ಯ), ರಾಗಿ-(ಮೂಳೆ ಗಟ್ಟಿಗೊಳಿಸುವುದು, ಹೃದಯ ರೋಗ ,ಕೆಂಪು ರಕ್ತಕಣ ಹೆಚ್ಚಿಸುವುದು),ಸಜ್ಜೆ-(ಕ್ಯಾನ್ಸರ ಹಾಗು ದೇಹತೂಕ ಇಳಿಕೆ),ಜೋಳ-( ಜಿರ್ಣಕ್ರೀಯೆ , ತ್ವಚೆ ಹೊಳಪು ಹಾಗು ಶುಗರ್) ರೋಗಗಳನ್ನು ನಿವಾರಿಸಬಹುದುಅಥವಾ ನಿಯಂತ್ರಣಕ್ಕೆ ತರಬಹುದು.
ಮುಖ್ಯವಾಗಿ ಎಲ್ಲಾ ಸಿರಿಧಾನ್ಯಗಳ ಬೇಸಾಯವು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಇಲ್ಲದೇ ಬೆಳೆಸಲಾಗುತ್ತಿದ್ದು ಇವು ಸಾವಯವ ಆಹಾರ ಎಂದೇ ಹೆಸರುವಾಸಿಯಾಗಿವೆ.
ಹೆಚ್ಚಿನ ಮಾಹಿತಿಗಾಗಿ; ಸಿರಿಧಾನ್ಯ ಬಿತ್ತನೆ ಬೀಜಕ್ಕಾಗಿ ಈ ಸಂಸ್ಥೆಯ ಅಧಿಕಾರಿಗಳಾದ ಸಂಜು +91 8310355313, ಮಹೇಶ +91 8722336565, ಗಿರೀಶ್ +91 9164767474 , ರಾಜಕುಮಾರ ಚಿಲ್ಲರ್ಗೆ +91 9916053221 ಅವರನ್ನು ಸಂಪರ್ಕಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.