ಕೊಡಗು: ರಾಜ್ಯಾದ್ಯಂತ ಒಂದುದಿನದ ಮಟ್ಟಿ ಸ್ವಲ್ಪ ಬಿಡುವು ಕೊಟ್ಟಿದ ವರಣ ಮತ್ತೆ ಅಬ್ಬರಿಸುತ್ತಿದ್ದು, ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಹೌದು ಮುಂಗಾರಿನ ಪ್ರಭಾವದಿಂದಾಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿದೆ. ಅಲ್ಲದೇ, ಲಕ್ಷ್ಮಣತೀರ್ಥ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ತ್ರಿವೇಣಿ ಸಂಗಮ ಭರ್ತಿಯಾದ ಹಿನ್ನೆಲೆ ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದೆ. ಮಳೆ ಮುಂದುವರಿದರೆ ಜಲಾವೃತವಾಗುವ ಸಾಧ್ಯತೆಯಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬೇತ್ರಿಯಲ್ಲೂ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಹೀಗಾಗಿ, ನದಿ ಪಾತ್ರದ ಜನರು ಎಚ್ಚರದಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಲಕ್ಷ್ಮಣತೀರ್ಥ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಶ್ರೀಮಂಗಲ-ನಾಲ್ಕೇರಿ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಕುಟ್ಟ ಮಾರ್ಗದಲ್ಲಿ ಸಂಚರಿಸಲು ಸ್ಥಳೀಯರಿಗೆ ಸೂಚಿಸಲಾಗಿದೆ.
ಮತ್ತೊಂದೆಡೆ ಮಳೆಯಿಂದಾಗಿ ಅಯ್ಯಂಗೇರಿಯಲ್ಲಿ ಬರೆ ಕುಸಿದಿದೆ. ರಾಣಿ ಒನ್ನವ್ವ ಎಂಬವರ ಮನೆಯ ಬದಿಯ ಬರೆ ಕುಸಿದಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.