ಕೊಚ್ಚಿ: ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತಕ್ಕೀಡಾದ ಪರಿಣಾಮ ಇಬ್ಬರು ಪೈಲಟ್‌ಗಳು ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪತನದ ಮಾದರಿಯಲ್ಲಿ ಈ ಘಟನೆ ನಡೆದಿದೆ. ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ ಈ ಘಟನೆ ಸಂಬಂಧ ತನಿಖೆಗೆ ಆದೇಶಸಿದೆ.
ಶುಕ್ರವಾ ಸಂಜೆ 7.45 ಕ್ಕೆ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 174 ಪ್ರಯಾಣಿಕರು 10 ಮಕ್ಕಳು 5 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ಗಳು IX- 1344 ವಿಮಾನದಲ್ಲಿದ್ದರು. ರನ್ವೇಯಿಂದ ಕಣಿವೆಗೆ ಜಾರಿದ ಪರಿಣಾಮ ವಿಮಾನ ಇಬ್ಭಾಗವಾಗಿದೆ.
2019 ರಲ್ಲೇ ಈ ರನ್ ವೇ ಯಲ್ಲಿರುವ ಸಮಸ್ಯೆಯ ಬಗ್ಗೆ ಡಿಜಿಸಿಎ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಇತ್ತೀಚಿನ ವರದಿಯ ಪ್ರಕಾರ 40 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು ರಕ್ಷಣಾ ಕಾರ್ಯ ಚುರುಕುಪಡೆದುಕೊಂಡಿದೆ. ಕೇರಳ ಸರ್ಕಾರ 04832719493 ಸಹಾಯವಾಣಿಯನ್ನು ಪ್ರಾರಂಭಿಸಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ಬದುಕಿ ಉಳಿದ ಎಲ್ಲರನ್ನೂ ವಿಮಾನದ ಅವಶೇಷಗಳಿಂದ ರಕ್ಷಣೆ ಮಾಡಲಾಗಿದೆ. ವಿಮಾನದಲ್ಲೇ ಸಿಲುಕಿರುವ ಓರ್ವ ಪ್ರಯಾಣಿಕ ಸಹ ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿನ ಸಂಸದ ಇ.ಟಿ ಮೊಹಮ್ಮದ್ ಬಶೀರ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಹಾಗೂ ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ ಗೆ ತೆರಳುವ ಎಲ್ಲಾ ವಿಮಾನಗಳನ್ನು ಕಣ್ಣೂರು ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.