ವಿಜಯಪಥ ವಿಶೇಷ ಸುದ್ದಿ
ಬೆಂಗಳೂರು: 2007ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಜಾರಿಗೆ ತರಲೇಬೇಕು ಎಂದು ಸತಾಯ ಗತಾಯ ಪ್ರಯತ್ನಪಟ್ಟು ಅಧಿಕಾರಿಗಳ ವಿರೋಧದ ನಡುವೆಯೂ ಜಾರಿಗೆ ತಂದು ಬಡವರ ಮಕ್ಕಳಿಗೆ ಬೆಚ್ಚನೆಯ ಕಿಟ್ ವಿತರಿಸಿದ ಆ ನಾಯಕ ಇಂದು ಅವರದೇ ಸರ್ಕಾರ ವಿದ್ದರೂ ಮೂಕರಾಗಿದ್ದಾರೆ.
ಹೌದು! 2007ರಲ್ಲಿ ರಾಜ್ಯದಲ್ಲಿ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಅವರಿಗೆ ಹೆರಿಯಾದ ನಂತರ ನವಜಾತ ಶಿಶುವಿಗೆ ಮಡಿಲು ಕಿಟ್ ವಿತರಿಸಿದ ಕೀರ್ತಿಗೆ ಪಾತ್ರರಾದವರು ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿದ್ದ, ಇಂದು ಕಂದಾಯ ಸಚಿವರಾಗಿರುವ ಆರ್. ಅಶೋಕ್.
ಅಂದು ಈ ಮಡಿಲು ಕಿಟ್ ಯೋಜನೆ ರೂಪಿಸಲು ಸ್ವತಃ ಅಂದು ಆರೋಗ್ಯ ಇಲಾಖೆಯಲ್ಲಿದ್ದ ಐಎಎಸ್ ಅಧಿಕಾರಿಗಳೆ ಇದು ಅಸಾಧ್ಯ ಈ ಯೋಜನೆ ಕೈಬಿಡುವುದೇ ಒಳಿತು ಎಂದು ಸಲಹೆ ನೀಡಿದ್ದರಂತೆ. ಆದರೂ ಈ ಯೋಜನೆಯನ್ನು ಮಾಡೇ ತೀರಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡ ಆರ್. ಅಶೋಕ್ ಅವರು ತಾವೆ ತಮ್ಮ ಸ್ವಂತ ಹಣದಿಂದ 15-20 ಮಡಿಲು ಕಿಟ್ ತಯಾರಿಸಿ ಅದನ್ನು ಒಂದು ಸಮಾರಂಭ ಆಯೋಜನೆ ಮಾಡುವ ಮೂಲಕ ನವಜಾತ ಶಿಶುಗಳ ತಾಯಂದಿರಿಗೆ ವಿತರಣೆ ಮಾಡಿದರು.
ಅಂದಿನಿಂದ ಅದು ಹಲವು ಏಳು ಬೀಳುಗಳನ್ನು ಕಂಡು ನೆಗೆಯುತ್ತ ಕುಂಟುತ್ತ ಸಾಗುತ್ತಿತ್ತು. ಈಗ ಕೊರೊನಾ ಕಾರಣ ನೀಡಿ ಈ ಮಡಿಲು ಕಿಟ್ ವಿತರಣೆಗೆ ಎಳ್ಳು ನೀರು ಬಿಡಲು ಸರ್ಕಾರ ಹೊರಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ವತಃ ಅಧಿಕಾರಿಗಳನ್ನು ಎದುರು ಹಾಕಿಕೊಂಡು ಒಂದೊಳ್ಳೆ ಯೋಜನೆಯನ್ನು ರೂಪಿಸಿದ್ದಾರೆ. ಈಗ ಇವರದ್ದೆ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಎಷ್ಟ ಸರಿ ಎಂಬ ಪ್ರಶ್ನೆಕೂಡ ಎದ್ದಿದೆ.
ಯೋಜೆನೆಯ ಏಳು ಬೀಳು
ಎಸ್‌ಸಿ,ಎಸ್‌ಟಿ ಹಾಗೂ ಬಡ ವರ್ಗದ ಬಾಣಂತಿಯರಿಗೆ ನೀಡುತ್ತಿದ್ದ ಮಡಿಲು ಕಿಟ್ ಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಬ್ರೇಕ್ ಹಾಕಿದೆ. ಅನುದಾನದ ಕೊರೆತ ಹಾಗೂ ಗುಣಮಟ್ಟದ ವಸ್ತುಗಳ ಅಲಭ್ಯತೆಯಿಂದಾಗಿ ಮಡಿಲು ಕಿಟ್ ವಿತರಣೆ ಯೋಜನೆಯನ್ನು ನಿಲ್ಲಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದರಾಮಯ್ಯ ಸರ್ಕಾರದಲ್ಲೇ ತಿಳಿಸಿತ್ತು.
ಹೆರಿಗೆ ನಂತರ ಬಾಣಂತಿಯರಿಗೆ ಮಡಿಲು ಕಿಟ್ ವಿತರಿಸಲಾಗುತ್ತಿತ್ತು, ಅದರಲ್ಲಿ ತಾಯಿ ಮತ್ತು ಮಗುವಿಗೆ ಅವಶ್ಯಕತೆಯಿರುವ 19 ವಸ್ತುಗಳನ್ನು ನೀಡಲಾಗುತ್ತಿತ್ತು. ಕಾಟನ್ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಎಣ್ಣೆ ಮತ್ತು ಸೋಪು ಹಾಗೂ ಬೆಲ್ಟ್ ಹಾಗೂ ಬೆಡ್ ಸ್ಪ್ರೆಡ್ ಗಳನ್ನು ನೀಡಲಾಗುತ್ತಿತ್ತು.
ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಹಯೋಗದಲ್ಲಿ 2007 ರಲ್ಲಿ ಮಡಿಲು ಕಿಟ್ ವಿತರಣೆ ಯೋಜನೆ ಆರಂಭವಾಯಿತು. ಆದರೆ 2017 ಜುಲೈನಲ್ಲಿ ರಾಜ್ಯ ಸರ್ಕಾರ ಯೋಜನೆಗೆ ಹಣ ನೀಡಲು ಮುಂದಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಹೇಳಿದ್ದರು.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಆದರೆ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿದೆ ಜೊತೆಗೆ ಗುಣಮಟ್ಟದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಮಡಿಲು ಕಿಟ್ ವಿತರಣೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ ಎಂದು ಅವರು ತಿಳಿಸಿದ್ದರು.
ಹೆಣ್ಣು ಶಿಶು ಜನಿಸಿದರೇ 6 ಸಾವಿರ ರೂ. ಡೆಪಾಸಿಟ್ ಮಾಡುವ ಹೊಸ ಯೋಜನೆ ಹಾಗೂ ನವಜಾತ ಶಿಶುವಿಗೆ 1 ಸಾವಿರ ರೂ. ಡೆಪಾಸಿಟ್ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರಣ ಮಡಿಲು ಕಿಟ್ ಗೆ ಹಣ ನೀಡಲು ರಾಷ್ಚ್ರೀಯ ಆರೋಗ್ಯ ಮಿಷನ್ ನಿರಾಕರಿಸಿದೆ ಎಂದು ಹೇಳಿದ್ದರು.
ಮಡಿಲು ಕಿಟ್ ಯೋಜನೆ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಶ್ಲಾಘನೆ ವ್ಯಕ್ತಪಡಿಸಿತ್ತು, ಬಾಣಂತಿಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಈಗ ಕೊರೊನಾ ಸೋಂಕಿನಿಂದ ಲಾಕ್‌ಡೌನ್ ಇತರ ಕಾರಣಗಳಿಂದ ಅನುದಾನ ಕೊರತೆಯಾಗಿದ್ದು ಮಡಿಲು ಕಿಟ್ ವಿತರಣೆಗೆ ಸಮಸ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ರೀತಿ ಒಂದೊಂದು ಜನಪರ ಯೋಜನೆಗಳು ಹಳ್ಳ ಹಿಡಿದರೆ ಬಡವರನ್ನು ಆರ್ಥಿಕವಾಗಿ ಮೇಲೆತ್ತಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಎದ್ದಿದೆ.