ಮೈಸೂರು: ಕೊವೀಡ್-19 ಹಿನ್ನೆಲೆಯಲ್ಲಿ ಆಷಾಢ ಮಾಸದ ಎಲ್ಲಾ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮತ್ತು ಶ್ರೀ ಚಾಮುಂಡೇಶ್ವರಿ ವರ್ಧಂತಿ ದಿನದಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡದಿರಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮಂಗಳವಾರ ಚಾಮುಂಡಿಬೆಟ್ಟದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೂನ್ 26 ರಿಂದ ಆಷಾಢ ಶುಕ್ರವಾರ ಪ್ರಾರಂಭವಾಗಲಿದ್ದು, ಜುಲೈ 3, 10 ಹಾಗೂ 17ರಂದು ಪೂಜೆ ನಡೆಯಲಿದೆ. ಈ ಆಷಾಢ ಮಾಸದ ಶುಕ್ರವಾರ ಹಾಗೂ ಅದರ ಮುಂದಿನ ದಿನಗಳಾದ ಶನಿವಾರ ಮತ್ತು ಭಾನುವಾರ ವಿಶೇಷ ಪೂಜೆಗಾಗಿ ವೃದ್ಧರು, ಮಕ್ಕಳು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಚಾಮುಂಡಿಬೆಟ್ಟಕ್ಕೆ ದರ್ಶನ ಪಡೆಯಲು ಆಗಮಿಸುವುದರಿಂದ ಕೊರೊನಾ ಸೋಂಕು ಹರಡಬಹುದು ಎಂದು ಮುನ್ನೆಚ್ಚರಿಕೆಯಾಗಿ ಈ ತೀರ್ಮಾನ ಕೈಗೊಳ್ಳಾಗಿದ ಎಂದರು.
ಜನರ ಧಾರ್ಮಿಕ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಆದರೆ, ಎಲ್ಲದಕ್ಕಿಂತಲೂ ಮಿಗಿಲಾಗಿ ಸಾರ್ವಜನಿಕರ ಆರೋಗ್ಯ ಹಾಗೂ ಜೀವ ಮುಖ್ಯವಾಗುತ್ತದೆ. ಇದರಿಂದ ದೇವಸ್ಥಾನಕ್ಕೆ ಕಪ್ಪುಚುಕ್ಕಿಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳಿಯ ಜನಪ್ರತಿನಿಧಿಗಳು, ಚಾಮುಂಡಿಬೆಟ್ಟದ ನಿವಾಸಿಗಳು, ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿಯವರ ಅಭಿಪ್ರಾಯದ ಮೇರೆಗೆ ಒಮ್ಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಆಷಾಢ ಮಾಸದ ವಿಶೇಷ ದಿನಗಳಂದು ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಎಂದಿನಂತೆ ನಡೆಯಲಿವೆ. ಸಾರ್ವಜನಿಕರು ಈ ಮೂರು ದಿನಗಳು ಹಾಗೂ ವರ್ಧಂತಿ ದಿನದಂದು ಸಹಕರಿಸಬೇಕು. ಇನ್ನುಳಿದ ಸಾಮಾನ್ಯ ದಿನಗಳಲ್ಲಿ ಪ್ರವೇಶವಿದ್ದು, ದೈಹಿಕ ಅಂತರ ಕಾಪಾಡುವ ಮೂಲಕ ಶಿಸ್ತಿನಿಂದ ದರ್ಶನ ಪಡೆಯಬೇಕು ಎಂದರು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.