ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಕೋವಿಡ್ ಯುಪಿಎಚ್ ಸಿ ಮತ್ತು ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗುರುವಾರ ಬಿಡುಗಡೆ ಮಾಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳಾದ ಸಂಪರ್ಕಿತರ ಪತ್ತೆ ಹಚ್ಚುವಿಕೆ, ಕಂಟೈನ್ಮೆಂಟ್ ವಲಯದ ನಿರ್ವಹಣೆ, ಐ.ಎಲ್.ಐ. ಸಮೀಕ್ಷೆ, ಜ್ವರ ತಪಾಸಣಾ ಕೇಂದ್ರಗಳ ನಿರ್ವಹಣೆ, ಗಂಟಲು ದ್ರವ ಮಾದರಿ ಪರೀಕ್ಷೆ ಹಾಗೂ ಇತರೆ ಚಟುವಟಿಕೆಗಳ ನಿರ್ವಹಣೆ ವರಿದಿಯನ್ನು ಸಮಯಕ್ಕೆ ಸರಿಯಾಗಿ ಈ ತಂತ್ರಾಂಶಗಳಿಂದ ಪಡೆಯಬಹುದಾಗಿ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆಯಲು ಹಾಗೂ ಸಮಗ್ರವಾದ ವರದಿಯನ್ನು ಪ್ರತಿನಿತ್ಯ ಪ್ರಚಾರ ಪಡಿಸಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ(U.P.H.C) ಹಂತದಲ್ಲಿ ತಂತ್ರಾಂಶವನ್ನು ಅಳವಡಿಸಿಕೊಂಡು, ಕೋವಿಡ್-19 ಹಾಗೂ ಇನ್ನಿತರೆ ಕಾಯಿಲೆಗಳಿಗೆ ಸಂಬಂಧಿಸಿದ ವರದಿಗಳನ್ನು ತಯಾರಿಸಲು ಯುನೈಟೆಡ್ ವೇ ಆಫ್ ಬೆಂಗಳೂರು ವತಿಯಿಂದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ ಎಂದು ವಿವರಿಸಿದರು.
ಇನ್ನು ಕೋವಿಡ್-19 ಧೃಡೀಕೃತ ಪ್ರಕರಣಗಳನ್ನು ಆಗಿಂದಾಗಲೇ ಆಸ್ಪತ್ರೆಗಳಿಗೆ ದಾಖಲಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ, ಹಾಸಿಗೆಗಳನ್ನು ಕೇಂದ್ರ ಕಚೇರಿಯಲ್ಲಿ ಮತ್ತು ವಲಯ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಜೋನಲ್ ಕಮಾಂಡ್ ಕೇಂದ್ರಗಳ ಮೂಲಕ ಹಂಚಿಕೆ ಮಾಡಿ, ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ದಾಖಲಿಸಲು ಕೋವಿಡ್ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ರಾಮಮೋಹರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ಆಯುಕ್ತ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ (ಆರೋಗ್ಯ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.