ಬೆಂಗಳೂರು: ಒಂದೆಡೆ ದೇಶದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದು ಎಪಿಎಂಸಿ ಗಳನ್ನು ಮುಚ್ಚಲು ಸಕಾಲ ಎನ್ನುತ್ತಾರೆ, ಇನ್ನೊಂದೆಡೆ ಪ್ರಧಾನಿ ಮೋದಿಯವರು ಎಪಿಎಂಸಿ ಗಳನ್ನು ಮುಚ್ಚಲ್ಲ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಸಿಗುತ್ತೆ ಅಂತಾರೆ. ಇವರಿಬ್ಬರಲ್ಲಿ ಯಾರು ಸತ್ಯ ಹೇಳ್ತಿದ್ದಾರೆ? ಯಾರು ಸುಳ್ಳು ಹೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೃಷಿ ಕಾಯ್ದೆ ವಿರುದ್ಧ ಇಂದು ನಡೆದ ಭಾರತ ಬಂದ್ ಬೆಂಬಲಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಪ್ಪು ಬಾವುಟ ಪ್ರ ದರ್ಶಿಸಿ ಮಾತನಾಡಿದರು.
ಸರ್ಕಾರ ಜಾರಿಗೊಳಿಸುವ ಕಾನೂನುಗಳು, ನೀತಿ ನಿಯಮಗಳು ಸಕಾರಾತ್ಮಕ ಬದಲಾವಣೆ ತರುವಂತಿರಬೇಕೇ ಹೊರತು ಸರ್ವನಾಶಕ್ಕೆ ದಾರಿಮಾಡಿಕೊಂಡುವಂತೆ ಇರಬಾರದು. ರೈತರೇ ತಮಗೆ ಈ ಮಸೂದೆ ಬೇಡವೆಂದರೂ, ಏನಾದರೂ ಆಗಲಿ ಮಸೂದೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೊರಟಿರಲು ಕಾರಣವೇನು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿಯಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕೃಷಿಗೆ ಮಾರಕವಾದ ಮಸೂದೆಗಳ ವಿರುದ್ಧ ರೈತ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನಿರಂತವಾಗಿ ಇರಲಿದೆ. ರೈತರ ಪಾಲಿಗೆ ಮರಣ ಶಾಸನವಾದ ಕಾನೂನುಗಳು ಜಾರಿಯಾಗದಂತೆ ತಡೆಯಲು ಸದನದ ಒಳಗೆ ಮತ್ತು ಹೊರಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.