ಬೆಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಶುಕ್ರವಾರ ಸಂಜೆಯೇ ನೂತನ ಕಮಿಷನರ್ ಅಧಿಕಾರ ಸ್ವೀಕರಿಸುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಯಲ್ಲಿ ಸಕಲ ಸಿದ್ಧತೆಗಳೂ ನಡೆದಿದ್ದವು. ಆದರೆ ಕೊನೇ ಗಳಿಗೆಯಲ್ಲಿ ಅಧಿಕಾರ ಹಸ್ತಾಂತರ ಶನಿವಾರಕ್ಕೆ ಮುಂದೂಡಲ್ಪಟ್ಟಿತು.
ಇಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು, ಭಾಸ್ಕರ್ ರಾವ್ ಅವರು ಕಮಲ್ ಪಂತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
1990ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಉತ್ತರಾಂಚಲ ಮೂಲದ ಕಮಲ್ ಪಂತ್ ಸದ್ಯ ಗುಪ್ತಚರ ಇಲಾಖೆಯ ಎಡಿಜಿಪಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿಯಾಗಿ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿಯೂ, ಬೆಂಗಳೂರಿನಲ್ಲಿ ಹಲವು ವಿಭಾಗದಲ್ಲಿ ಡಿಸಿಪಿಯಾಗಿ ಕೆಲಸ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಎಸ್ಪಿ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಇಷ್ಟು ದಿನದವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಕಮಲ್ ಪಂತ್ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು.
ಭಾಸ್ಕರ್ ರಾವ್ ಮತ್ತು ಕಮಲ್ ಪಂತ್ ಒಂದೇ ಬ್ಯಾಚ್‌ನ ಅಧಿಕಾರಿಗಳಾಗಿರುವುದು ಮಾತ್ರವಲ್ಲದೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದಾರೆ. ಬೆಂಗಳೂರು ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕನ್ನಾಗಿ ನೇಮಕ ಮಾಡಲಾಗಿದೆ.
ನೂತನ ಆಯುಕ್ತರ ಸುದ್ದಿಗೋಷ್ಠಿ
ನಗರದ ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ದಿನ ನಾನು ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದು, ಈ ಹಿಂದೆ ಕರ್ತವ್ಯ ನಿರ್ವಹಿಸಿದ ದಕ್ಷ ಅಧಿಕಾರಿಗಳ ರೀತಿಯಲ್ಲಿ ಕೆಲಸ ಮಾಡುವೆ. ಪೊಲೀಸರು ಕೋವಿಡ್ ಸಮಯದಲ್ಲಿ ಅದ್ಭುತ ಕಾರ್ಯ ಮಾಡಿದ್ದಾರೆ. ಈ ವೇಳೆ ಕೆಲವರು ತಮ್ಮ ಜೀವ ನೀಡಿದ್ದಾರೆ. ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದರು.
ಕೆಲವು ಪೊಲೀಸರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇನ್ನು ಈ ಹಿಂದೆ ಆಯುಕ್ತರ ಹುದ್ದೆ ನಿರ್ವಹಿಸಿದ ಹಿರಿಯ ಅಧಿಕಾರಿಗಳಂತೆ ದಕ್ಷತೆಯಿಂದ ನಿರ್ವಹಿಸುತ್ತೇನೆ. ಉತ್ತಮ ಪೊಲೀಸಿಂಗ್ ನೀಡಲು ಜನರ ಸಹಕಾರ ಅಗತ್ಯ ಎಂದು ಹೇಳಿದರು.