ಬೆಂಗಳೂರು: ರಾಜ್ಯಾದ್ಯಂತ ಭಾನುವಾರದ ಲಾಕ್‌ಡೌನ್ ತೆರವಾಗಿರುವ ಹಿನ್ನೆಲೆ ಸಾರಿಗೆ ಸಂಚಾರ ಇಂದು ಮಾಮೂಲಿನಂತೆ ಇದೆ. ಆದರೆ ಜನರ ಓಡಾಟ ಮಾತ್ರ ವಿರಳವಾಗಿದೆ.
ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದ ಹೊರಗೆ ಆಟೋ ಹಾಗೂ ಕ್ಯಾಬ್ ಸಂಚಾರ ಎಂದಿನಂತಿದ್ದು, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಎಂದಿನಂತೆ ಸಂಚರಿಸುತ್ತಿವೆ. ಆದರೆ ಪ್ರಯಾಣಿಕರಿಲ್ಲದೆ ಬಹುತೇಕ ಎಲ್ಲಾ ವಾಹನಗಳು ಖಾಲಿ ಖಾಲಿಯಾಗಿಯೇ ಓಡಾಡುತ್ತಿವೆ.
ಅನ್‌ಲೌಕ್-3 ಮಾರ್ಗಸೂಚಿ ಶನಿವಾರದಿಂದ ಜಾರಿಗೆ ಬಂದಿದ್ದು, ಮಾರ್ಗಸೂಚಿಯಂತೆ ಹಿಂಪಡೆಯಲಾಗಿರುವ ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜಧಾನಿ ಸೇರಿ ರಾಜ್ಯದ ಎಲ್ಲಾ ಕಡೆ ವಾಹನ ಸಂಚಾರ ಹಾಗೂ ಜನಜೀವನ ಎಂದಿನಂತಿದೆ. ಆದರೆ ಕೊರೊನಾ ಮಹಾಮಾರಿ ಮಾತ್ರ ಬೆಂಬಿಡದೆ ಜನರನ್ನು ಕಾಡುತ್ತಿದೆ.
ಅಂತ್ಯೆಯೇ ಎರಡು ತಿಂಗಳುಗಳ ಭಾನುವಾರಗಳಂದು ಲಾಕ್‌ಡೌನ್ ಇದ್ದುದರಿಂದ ಬಹುತೇಕ ಜನರು ಮನೆಯಿಂದ ಹೊರಗಡೆ ಬಂದಿರಲಿಲ್ಲ. ಆದರೆ ಈ ಭಾನುವಾರ ಎಲ್ಲಾ ಚಟುವಟಿಕೆಗೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಹೀಗಿದ್ದರೂ ಸಾರ್ವಜನಿಕ ವಾಹನಗಳನ್ನು ಬಳಸಲು ಕೋವಿಡ್ ವೈರಸ್ ಭಯದಿಂದ ಜನರು ಹಿಂದೇಟು ಹಾಕುತ್ತಿದ್ದಾರೆ.
ಇಂದು ರಜಾ ದಿನವಾಗಿರುವುದರಿಂದ ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳು ಬಂದ್ ಆಗಿವೆ. ಹೀಗಾಗಿ ಜನಸಂಚಾರವೂ ವಿರಳವಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಮಾತ್ರ ಯಾವುದೇ ಆತಂಕ ಇಲ್ಲದೆ ಎಂದಿನಂತೆ ಸಂಚರಿಸುತ್ತಿರುವುದು ಕಂಡುಬರುತ್ತಿದೆ.