ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಸಿಬಿಐ ಶಾಕ್ ನೀಡಿದೆ. ನವೆಂಬರ್ 23ರಂದು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಸಿಬಿಐ ಸಮನ್ಸ್ ನೀಡಿದೆ. ಅಕ್ಟೋಬರ್ 5ರಂದು ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಸೇರಿ ಆಪ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೈ ಎಲೆಕ್ಷನ್ ತಯಾರಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಸಿಬಿಐ ಸೋಮವಾರ ವಿಚಾರಣೆಗೆ ಬನ್ನಿ ಎಂದು ಹೇಳಿದೆ.
ಬೆಂಗಳೂರಿನ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು ನಿಜ. ನವೆಂಬರ್ 19ರಂದು ಅಧಿಕಾರಿಗಳು ನಮ್ಮ ಮನೆಗೆ ನೋಟಿಸ್ ನೀಡಲು ಬಂದಿದ್ದರು. ಆದ್ರೆ ನಾನು ಮನೆಯಲ್ಲಿರಲಿಲ್ಲ. ನ. 23 ಸಂಜೆ ನಾಲ್ಕು ಗಂಟೆಗೆ ಕಚೇರಿಗೆ ಬರಲು ಸೂಚಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ನಾನು ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ತೆರಳುತ್ತಿದ್ದೇನೆ. ಹೀಗಾಗಿ ನ. 23ರ ಬದಲಾಗಿ ನ.25ಕ್ಕೆ ವಿಚಾರಣೆಗೆ ಬರೋದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.