ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ನ ಭೇಟಿ ಮಾಡಲು ಗುರುವಾರ ಮುಂಬೈನ ಅರ್ಥೂರ್ ರೋಡ್ ಜೈಲಿಗೆ ಆಗಮಿಸಿದರು.
ಇತ್ತೀಚೆಗೆ ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತು ಸೇವನೆ ಆರೋಪದ ಹಿನ್ನೆಲೆ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿದ್ದರು.
ಕಳೆದ ಅಕ್ಟೋಬರ್ 2ರಂದು ಬಂಧಿತರಾಗಿರುವ ಆರೋಪಿಗಳನ್ನು ಆರಂಭದಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ನಂತರ ಆರ್ಯನ್ ಖಾನ್ ಈ ಬಗ್ಗೆ ಬೇಲ್ ಪಡೆಯಲು ಕೋರ್ಟ್ ಮೊರೆ ಹೋಗಿದ್ದರು.
ಜಾಮೀನು ಅರ್ಜಿ ಕೋರಿ ಆರ್ಯನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈಯ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಆರ್ಯನ್ ಖಾನ್ ಪರ ವಕೀಲರು ತಕ್ಷಣವೇ ಎನ್ಡಿಪಿಎಸ್ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ನಡುವೆ ತಮ್ಮ ಪುತ್ರನ ಬಂಧನದ ಬಳಿಕ ಶಾರೂಕ್ ಖಾನ್ ಇದೇ ಮೊದಲ ಬಾರಿಗೆ ಜೈಲಿಗೆ ಭೇಟಿ ನೀಡಿದ್ದು, ಪುತ್ರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಇನ್ನುಶಾರೂಕ್ ಖಾನ್ ಪುತ್ರನ ನೋಡಲು ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಮಾಧ್ಯಮ ಪ್ರತಿನಿಧಿಗಳು, ಚಾನೆಲ್ಗಳ ಕ್ಯಾಮರಾಗಳು ಅವರ ಬರುವಿಕೆಯನ್ನು ಕಾತರದಿಂದ ಸೆರೆಹಿಡಿದಿವೆ.