ಬೆಂಗಳೂರು: ವೇತನ ಸಿಗದೆ ಅತಿಥಿ ಉಪನ್ಯಾಸಕರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರ ಒಳಗೆ ಅತಿಥಿ ಉಪನ್ಯಾಸಕರ ಖಾತೆಗೆ ಸಂಬಳ ಜಮೆ ಮಾಡದಿದ್ದರೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಪ್ರಾರಂಭ ಆದಾಗಿನಿಂದ ನಯಾ ಪೈಸೆ ಸಂಬಳ ಕೊಡದೆ ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕರನ್ನು ಉಪವಾಸ ಕೆಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕ ಚನ್ನಬಸಪ್ಪ ರೇವಡಿ ಮಾತನಾಡಿ, ಲಾಕ್ಡೌನ್ ಪ್ರಾರಂಭ ಆದಾಗಿನಿಂದ ನಯಾ ಪೈಸೆ ಸಂಬಳ ಕೊಡದೆ ರಾಜ್ಯ ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕರನ್ನು ಉಪವಾಸ ಕೆಡವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಸಂಬಳ ಕೊಡಿ ಇಲ್ಲ ಪ್ರಾಣ ಬಿಡಲು ಅನುಮತಿ ಕೊಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಸಂಬಳ ಸಿಗದೆ 23 ಜನ ಉಪನ್ಯಾಸಕರು ಜೀವ ಬಿಟ್ಟಿದ್ದಾರೆ, ನಿಮಗೆ ಇನ್ನೆಷ್ಟು ಜೀವ ಬೇಕು ಎಂದು ಪ್ರಶ್ನಿಸಿದರು.
ಅತಿಥಿ ಉಪನ್ಯಾಸಕ ಎಲ್.ಎನ್.ರೆಡ್ಡಿ ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಕೈಹಿಡಿಯದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿ ಸಂಬಳ ನೀಡಿ ಎಂದು ಹೇಳಿ ಸರ್ಕಾರದ ಅಡಿಯಲ್ಲಿ ದುಡಿಯುತ್ತಿರುವ ನಮಗೆ ಮೋಸ ಮಾಡುತ್ತಿದೆ. ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿದ್ದು ಮತ್ತೆ ನಮ್ಮನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ವಚನ ಭ್ರಷ್ಟರಾಗಿದ್ದಾರೆ ಎಂದರು.