ಗುರುಗ್ರಾಮ: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ (71) ಬುಧವಾರ ಮುಂಜಾನೆ ನಿಧನರಾಗಿದ್ದಾರೆ.
ಕೆಲ ವಾರಗಳ ಹಿಂದಷ್ಟೇ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಂತೆ ಗುರುಗ್ರಾಮದ ಮೆಡಂತಾ ಅಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಫರೀದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತಮಗೆ ಕೊರೊನಾ ಸೋಂಕು ತಗುಲಿರುವ ಕುರಿತು ಅಕ್ಟೋಬರ್ 1 ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಹೇಳಿಕೊಂಡಿದ್ದರು. ಅಲ್ಲದೆ ಹೋಮ್ ಐಸೋಲೇಷನ್ ನಲ್ಲಿರುವುದಾಗಿಯೂ ಮಾಹಿತಿ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ಚೇತರಿಕೆಗಳು ಕಂಡು ಬರದ ಹಿನ್ನೆಲೆಯಲ್ಲಿ ಫರೀದಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಚೇತರಿಕೆ ಕಂಡು ಬರದ ಹಿನ್ನೆಲಯೆಲ್ಲಿ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದರು.
ಅಹ್ಮದ್ ಪಟೇಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದ ಅಹ್ಮದ್ ಪಟೇಲ್ ಅವರು, ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು.
1949ರ ಆ. 21ರಂದು ಗುಜರಾತ್‌ನಲ್ಲಿ ಜನಿಸಿದ್ದ ಅಹ್ಮದ್ ಪಟೇಲ್ ಲೋಕಸಭೆಗೆ 3 ಬಾರಿ ಆಯ್ಕೆಯಾಗಿದ್ದರು. 5 ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೊತೆಗೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಆಗಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಸಂತಾಪ
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನದಿಂದ ನಾನು ಘಾತಕ್ಕೊಳಗಾಗಿದ್ದೇನೆ ಮತ್ತು ತುಂಬಾ ದುಃಖಿತನಾಗಿದ್ದೇನೆ.
ಅವರ ಅಗಲಿಕೆಯಿಂದ ನಮ್ಮ ರಾಷ್ಟ್ರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬದವರಿಗೆ ಅಗಲಿಕೆ ಶಕ್ತಿಯನ್ನು ಆದೇವರು ಕೊಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಾರ್ಥಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ನನಗೆ ಆತ್ಮೀಯರಾಗಿದ್ದ ಅಹ್ಮದ್ ಪಟೇಲ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ದೀರ್ಘಕಾಲ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್ ಪಕ್ಷಕ್ಕೆ ಆಧಾರಸ್ಥಂಭವಾಗಿದ್ದರು.
ಇವರ ಸಾವು ಪಕ್ಷಕ್ಕೆ ತುಂಬಿಬಾರದ ನಷ್ಟ.ಅವರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ
ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅಹ್ಮದ್ ಪಟೇಲ್ ಅವರು ಸಾವಿನ ಸುದ್ದಿ ಆಘಾತವನ್ನುಂಟು ಮಾಡಿದೆ. ತಮ್ಮ ಬಹುತೇಕ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಅಹ್ಮದ್ ಪಟೇಲ್ ಅವರ ಪಾತ್ರ ಪ್ರಮುಖವಾದದ್ದು. ಅಗಾಧ ನೆನಪಿನ ಶಕ್ತಿಗೆ ಪಟೇಲರು ಹೆಸರುವಾಸಿಯಾಗಿದ್ದರು. ಪೇಟಲ್ ಅವರ ಪುತ್ರ ಫೈಸರ್ ಜೊತೆ ಮಾತನಾಡಿ, ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ಅವರ ಅಗಲಿಕೆ ಸಾಕಷ್ಟು ನೋವು ತಂದಿದೆ. ಅವರ ಕುಟುಂಬಕ್ಕೆ, ಬೆಂಬಲಿಗರಿಗೆ ಇವರ ಅಗಲಿಕೆಯ ದುಃಖ ಬರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.