ಬೆಂಗಳೂರು: ರಾಜ್ಯದಲ್ಲೇ ಭಾರಿ ಸೌಂಡ್ ಮಾಡಿದ್ದ ದೇವರ ಜೀವನಹಳ್ಳಿ (ಡಿಜೆ ಹಳ್ಳಿ) ಮತ್ತು ಕಾಡುಗೊಂಡನ ಹಳ್ಳಿ(ಕೆಜಿ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಶಾಸಕರ ಮನೆ ಧ್ವಂಸ ಮತ್ತು ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದೆ.
ಪುಲಕೇಶಿ ನಗರದ ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಹಣಕಾಸಿನ ಸಹಾಯ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್ ಎಂದು ತಿಳಿದುಬಂದಿದೆ.
ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಉಚಿತವಾಗಿ ಪೆಟ್ರೋಲ್ ನೀಡಿದ್ದರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದ. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಈ ಆರೋಪ ಪಟ್ಟಿಯಲ್ಲಿ ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಅಂಶ ಉಲ್ಲೇಖವಾಗಿದೆ.
50 ಪುಟಗಳ ಮಧ್ಯಂತರ ಚಾರ್ಜ್ ಶೀಟ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಪಾಲಿಕೆ ಮಾಜಿ ಸದಸ್ಯ ಜಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ.ಆರ್. ಜಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.
ಅಖಂಡ ಬೆಂಬಲಿಗರಿಂದ ಪ್ರತಿಭಟನೆ
ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರಸ್ತೆಯಲ್ಲಿರುವ ಸಂಪತ್ ರಾಜ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.