ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಜುಲೈ ಮೊದಲ ವಾರ ಅಥವಾ 2ನೇ ವಾರದಲ್ಲಿ ಕೊರೊನಾ ಲಸಿಕೆ ವಿತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಲೇಜುಗಳು ಆರಂಭಗೊಂಡ ನಂತರ ಮರಳಿ ಕಾಲೇಜಿಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ಸದ್ಯ ಆತಂಕಕ್ಕೆ ಕಾರಣವಾಗಿರುವ ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್‌ಗೆ ಲಸಿಕೆಯೇ ಸಂಜೀವಿನಿಯಾಗಿದ್ದು, ಕೊರೊನಾ ಕೇಸ್ ಹೆಚ್ಚಾಗುವುದರಿಂದ ವೈರಾಣು ರೂಪಾಂತರವಾಗಲಿದೆ. ಹೀಗಾಗಿ ಕೋವಿಡ್ ಲಸಿಕೆಯೇ ಇದರ ನಿಯಂತ್ರಣಕ್ಕೆ ರಾಮಬಾಣವಾಗಿದೆ. ಹೊಸ ವೈರಸ್ ಬಗ್ಗೆ ಜನ ಭಯಪಡುವ ಅಗತ್ಯತೆ ಇಲ್ಲ. ರಾಜ್ಯ ಸರ್ಕಾರ ಸಮರ್ಥವಾಗಿ ಎಲ್ಲವನ್ನು ನಿಭಾಯಿಸಲಿದೆ. ಜನರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಇನ್ನು ಶಾಲಾ, ಕಾಲೇಜು ಆರಂಭಿಸುವ ಬಗ್ಗೆ ಸಾರ್ವಜನಿಕರು ಗೊಂದಲ ಹೊಂದುವ ಅಗತ್ಯವಿಲ್ಲ. ಲಸಿಕೆ ವಿತರಿಸಿದ ನಂತರವೇ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಮೊದಲು ಪಿಜಿ, ನಂತರ ಪದವಿ ಕಾಲೇಜುಗಳ ಆರಂಭಿಸಿ, ಬಳಿಕ ಪ್ರೌಢಶಾಲೆಗಳನ್ನು ಆರಂಭ ಮಾಡಲಾಗುವುದು. ಸರ್ಕಾರಕ್ಕೆ ವಿದ್ಯಾರ್ಥಿಗಳ ಕ್ಷೇಮವೆ ಮುಖ್ಯವಾಗಿದ್ದು, ಶಾಲಾ ಕಾಲೇಜು ಆರಂಭಿಸುವ ಆತುರ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.