ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ದೀಪಾವಳಿ ವರೆಗೂ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತ ಪಡಿತರ ನೀಡಲಾಗುವುದು, ಜೂನ್ 21ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಕೇಂದ್ರವೇ ಔಷದ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ಸಂಜೆ ದೇಶವನ್ನುದ್ದೇಶಿಸಿ ಮಾಡಿತ ಭಾಷಣದಲ್ಲಿ, ಭಾರತ ತನ್ನ ಶಕ್ತಿ ಮೀರಿ ಕೊರೊನಾ 2ನೇ ಅಲೆ ವಿರುದ್ಧ ಹೋರಾಡಿದೆ. ಹೀಗಾಗಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳು ಹೆಚ್ಚಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಹಿಂದೆಂದೂ ಅಗತ್ಯವಿರಲಿಲ್ಲ. ಈ ಬಾರಿ ಸಮರೋಪಾದಿಯಲ್ಲಿ ಆಕ್ಸಿಜನ್ ಸರಬರಾಜು ಆಗಿದೆ. ಕೊರೊನಾ ಲಸಿಕೆ ಪ್ರತಿಯೊಬ್ಬರಿಗೂ ರಕ್ಷಾ ಕವಚವಾಗಿದೆ. ನಾವು ಸ್ವತಃ ವ್ಯಾಕ್ಸಿನ್ ತಯಾರಿಸಲು ಸಾಧ್ಯವಾಗದೇ ಇದ್ದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು? ಆ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಸಂಪೂರ್ಣ ಲಸಿಕಾಕರಣವಾಗಬೇಕು. ಇದು ವರ್ಷಗಟ್ಟಲೆ ಆಗಬಹುದು ಎಂಬ ಆತಂಕ ವ್ಯಕ್ತವಾಯಿತು. ಹೀಗಾಗಿಯೇ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿದೆವು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು.
ಈಗ 20 ಕೋಟಿಗೂ ಹೆಚ್ಚು ಲಸಿಕೆಗಳನ್ನು ದೇಶಾದ್ಯಂತ ನೀಡಲಾಗಿದೆ. ಯುದ್ಧೋಪಾದಿಯಲ್ಲಿ ಲಸಿಕೆ ಹಾಕುವ ಕಾರ್ಯವು ನಡೆಯುತ್ತಿದ್ದು, ಕೊರೊನಾ ಸೋಂಕು ನಿಯಂತ್ರಿಸಲು ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಈವರೆಗೆ ರಾಜ್ಯಗಳು ಲಸಿಕೆ ಖರೀದಿಸಿ ನೀಡುತ್ತಿದ್ದವು. ಈಗ ಕೇಂದ್ರವೇ ಲಸಿಕೆಯನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದರು.
ಆತ್ಮನಿರ್ಭರ್ ಪ್ಯಾಕೇಜ್ನಡಿ ಕೋವಿಡ್ ಪ್ಯಾಕೇಜ್ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. 3 ಟ್ರಯಲ್ಗಳು ಮುಂದುವರಿದಿವೆ, ಒಟ್ಟಾರೆ ದೇಶವಾಸಿಗಳೆಲ್ಲರಿಗೂ ಲಸಿಕೆ ನೀಡುತ್ತೇವೆ ಎಂದರು.
150 ರೂ.ಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ
ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 150 ರೂಪಾಯಿ ಸೇವಾ ಶುಲ್ಕ ವಿಧಿಸಬಹುದಾಗಿದೆ. ಶೇ.75ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಲಿದೆ ಎಂದು ಮೋದಿ ತಿಳಿಸಿದರು.