ನ್ಯೂಡೆಲ್ಲಿ: ದೇಶಕ್ಕೆ ಕೊರೊನಾ ಮಹಾಮಾರಿ ವಕ್ಕರಿಸಿದ ಬಳಿಕ ಲಕ್ಷಾಂತರ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ವಿಶ್ವಮಾರಿ ಕೊರೊನಾಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ. ಈವರೆಗೆ ದೇಶದಲ್ಲಿ ಕೊರೊನಾದಿಂದ 4 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂಬುದು ಅಧಿಕೃತ ವೆಬ್ಸೈಟ್ ನೀಡಿರುವ ಮಾಹಿತಿ.
ಆದರೆ, ಹೊಸ ಅಂಕಿ-ಅಂಶಗಳ ಪ್ರಕಾರ ಸಾವಿನ ಸಂಖ್ಯೆ ಕೇವಲ 4 ಲಕ್ಷ ಅಲ್ಲ. ಹೌದು, ನೂತನ ವರದಿ ಪ್ರಕಾರ ಕೊರೊನಾ ಸೋಂಕಿನಿಂದ ಇದುವರೆಗೆ 49 ಲಕ್ಷ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ನೂತನ ವರದಿಯೊಂದು ತಿಳಿಸಿದೆ.
ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಸಹ ಲೇಖಕರಾಗಿರುವ, ಅಮೆರಿಕ ಮೂಲದ ಗ್ಲೋಬಲ್ ಡೆವ-ಲಪ್‌ಮೆಂಟ್ ಸಂಸ್ಥೆಯ ಜಸ್ಟಿನ್ ಸ್ಯಾಂಡೆಫರ್ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಅಭಿಷೇಕ್ ಆನಂದ್ ತಯಾರಿಸಿದ ವರದಿ ಮಂಗಳವಾರ ಬಿಡುಗಡೆಯಾಗಿದೆ. ಇದರಲ್ಲಿ 34-49 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
‘ಕೊರೊನಾದಿಂದ ಇಷ್ಟೇ ಜನ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ 2020ರ ಜನವರಿಯಿಂದ 2021ರ ಜೂನ್ ಅವಧಿಯಲ್ಲಿ 34 ಲಕ್ಷದಿಂದ 49 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಧಿಕೃತವಾಗಿ ನೀಡಿರುವ ಮಾಹಿತಿಗಿಂತ 40 ಲಕ್ಷ ಅಧಿಕ ಜನರಂತೂ ಸಾವಿಗೀಡಾಗಿದ್ದಾರೆ,” ಎಂದು ವರದಿ ತಿಳಿಸಿದೆ.
”ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ನಡೆದ ಮಹಾ ದುರಂತಗಳಿಗಿಂತ ಹೆಚ್ಚಿನ ಪ್ರಮಾಣದ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಖಂಡಿತವಾಗಿಯೂ ಇದು ನೂರು, ಸಾವಿರ ಇಲ್ಲ. ಲಕ್ಷಾಂತರ ಜನ ಸೋಂಕಿಗೆ ಬಲಿಯಾಗಿದ್ದಾರೆ,” ಎಂದು ಲೇಖಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.