ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಿತ್ಯ 50,000 ಪಾಸಿಟಿವ್ ಕೇಸ್ ಗಳು ದಾಖಲಾಗ್ತಿವೆ. ಹೀಗಾಗಿ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಜನರಿಗೆ ಆರ್ಥಿಕ ನೆರವು ಮತ್ತು ಅಗತ್ಯ ದಿನಸಿ ವಸ್ತುಗಳನ್ನು ಸರ್ಕಾರ ಕೂಡಲೇ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶ, ಕೇರಳದಲ್ಲಿ ವಿಶೇಷ ನೆರವಿನ ಪ್ಯಾಕೇಜ್ ನೀಡಿದ್ದಾರೆ, ಅದೇ ರೀತಿ ನಮ್ಮ ರಾಜ್ಯದಲ್ಲೂ ಲಾಕ್ ಡೌನ್ ಅವಧಿಯಲ್ಲಿ ದುಡಿಯುವ ವರ್ಗ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕು ಪರೀಕ್ಷೆ ಹೆಚ್ಚಾದರೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತದೆ, ಆಗ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ. ಇದು ಸರ್ಕಾರವೇ ಜನರನ್ನು ಸಾವಿನ ದವಡೆಗೆ ತಳ್ಳಿದಂತೆ ಎಂದು ಆಕ್ರೋಧ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಈ ವರೆಗೆ ನಮ್ಮ ರಾಜ್ಯಕ್ಕೆ ಅಗತ್ಯ ಪ್ರಮಾಣದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೇಂದ್ರದ ಮೋದಿ ಸರ್ಕಾರ ರಾಜ್ಯದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ಕೊವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾದ ಬಳಿಕ ಕೋರ್ಟ್ ಮಧ್ಯೆ ಪ್ರವೇಶಿಸಿದೆ, ಅಂದರೆ ದೇಶದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದರ್ಥ. ಈ ವರೆಗೆ ಸಂಭವಿಸಿರುವ ಸಾವು, ನೋವುಗಳಿಗೆ ಕೇಂದ್ರ ಸರ್ಕಾರವೇ ನೇರಹೊಣೆ.
ನಾನು ನಮ್ಮ ಶಾಸಕರೊಂದಿಗೆ ಮಾತನಾಡಿದ್ದೇನೆ. ಕೆಲವರು ವೈದ್ಯಕೀಯ ನೆರವು ನೀಡುತ್ತಿದ್ದಾರೆ, ಇನ್ನು ಕೆಲವರು ಆಹಾರ ಧಾನ್ಯ, ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಸಹಕಾರ ಸದಾ ಇರುತ್ತೆ. ಆದರೆ ಆಸ್ಪತ್ರೆ, ಅಂಬುಲೆನ್ಸ್, ಆಕ್ಸಿಜನ್ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಸರಣಿ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.