ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಿದರೆ ಮಾತ್ರ ಕೊರೊನಾ ಸೋಂಕನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ತಾಲೂಕಿನ ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಬ್ಬಳತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯು ಕೋವಿಡ್ ಕೇರ್ ಸೆಂಟರ್ ಹಾಗೂ ಪಟ್ಟಣದ ಲಕ್ಷ್ಮಿ ಹೆಲ್ತ್ಕೇರ್ ಸೆಂಟರ್ಗೆ ಭೇಟಿ ನೀಡಿ ಮಾತನಾಡಿದರು.
ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಮ್ಮು, ನೆಗಡಿ, ಶೀತ, ಮತ್ತಿತರ ಕಾಯಿಲೆಗಳು ಇರುವವರಿಗೆ ಮಾತ್ರ ಕೊರೊನಾ ಟೆಸ್ಟ್ ಮಾಡಿಸಬೇಕು ಇಂಥವರನ್ನು ಮೊದಲೇ ಗುರುತಿಸಿ ಔಷಧಿ ನೀಡುವುದರಿಂದ ಕೊರೊನಾ ಸೋಂಕು ಕಡಿಮೆಯಾಗಲಿದೆ ಎಂದರು.
ಪಟ್ಟಣದ ಲಕ್ಷ್ಮಿ ಹೆಲ್ತ್ಕೇರ್ ಸೆಂಟರ್ಗೆ ಭೇಟಿ ನೀಡಿ ಡಾ.ಪ್ರಕಾಶ್ ಬಾಬು ಅವರಿಗೆ ಸೂಕ್ತ ಸಲಹೆ ನೀಡಿ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ನೀಡಿರುವ ಮಾತ್ರೆಗಳನ್ನು ನೀಡಿ, ಹೆಚ್ಚು ಜನರನ್ನು ಸೇರದಂತೆ ಕ್ರಮವಹಿಸಿ ಅಗತ್ಯವಲ್ಲದ ಔಷಧಗಳನ್ನು ನೀಡಿ ಕೊರೊನಾದಿಂದ ಯಾರಾದರೂ ಸಾವಿಗೀಡಾದರೆ ಸಂಬಂಧಿಸಿದ ಕ್ಲಿನಿಕ್ ಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೂರು: ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ವಾಣಿಜ್ಯೋದ್ಯಮಿ ಬಿರ್ಲಾ ಹರೀಶ್ ತಮ್ಮ ತಂದೆಯನ್ನು ಬಲವಂತವಾಗಿ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲಾಗಿದೆ. ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ ಪ್ರತಿನಿತ್ಯ ನೂರಾರು ಕೋವಿಡ್ ಪಾಸಿಟಿವ್ ಕೇಸ್ ಗಳು ಬಂದರು ಎಲ್ಲರನ್ನೂ ಸಿಸಿ ಸೆಂಟರ್‌ಗೆ ರವಾನಿಸದೆ ರಾಜಕೀಯ ಮಾಡಲಾಗುತ್ತಿದೆ ಎಂದು ದೂರು ನೀಡಿದರು.
ಹುಣಸೂರು ಉಪವಿಭಾಗಾಧಿಕಾರಿ ಬಿ.ಎಂ.ವೀಣಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಕೃಷ್ಣಕುಮಾರ್, ತಹಸೀಲ್ದಾರ್ ಚಂದ್ರಮೌಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸಿಡಿಪಿಒ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೈದ್ಯ ತಿಮ್ಮೇಗೌಡ, ಶಿರಸ್ತೇದಾರ್ ವಿನೋದ್ ಕುಮಾರ್, ಸಿಪಿಐ ಜಗದೀಶ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಲತಾ, ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್ ಇದ್ದರು.