ನ್ಯೂಡೆಲ್ಲಿ: ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಲಿದ್ದು, ಈ ಮೂಲಕ ಸೋಂಕು ಹೆಚ್ಚಾಗಬಹುದು ಎಂದು ನೀತಿ ಆಯೋಗ ಆತಂಕದೊಂದಿಗೆ ಎಚ್ಚರಿಕೆ ನೀಡಿದೆ.
ಬಿಸಿಲಿನ ನಡುವೆಯೇ ತನ್ನ ಅಟ್ಟಹಾಸ ಮೆರೆದಿರುವ ಕೋವಿಡ್-19 ವೈರಸ್ ಚಳಿಗಾಲದಲ್ಲಿ ಮತ್ತಷ್ಟು ತನ್ನ ಪ್ರಭಾವ ಬೀರಲು ಸಜ್ಜಾಗುತ್ತಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿಸಿದೆ.
ಹೀಗಾಗಿ ಚಳಿಗಾಲದಲ್ಲಿ ಸ್ವಲ್ಪ ಯಾಮಾರಿದರೂ ದೇಹವನ್ನು ಹೊಕ್ಕಲಿದೆ. ಇನ್ನು ಚಳಿಗಾಲದಲ್ಲಿ ಶೀತ, ಕೆಮ್ಮು ಸೇರಿ ಹಲವು ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅದರಲ್ಲೂ ವಯಸ್ಸಾದವರು ಮನೆಯಿಂದ ಹೊರ ಬಂದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದೆ.
ಚಳಿಗಾಲದಲ್ಲಿ ಕೊರೊನಾ ವೈರಸ್ ಮಲ್ಟಿಪಲ್ ಆಗುವ ಸಾಧ್ಯತೆ ಇದೆ. ಜತೆಗೆ ಜನರು ಒಬ್ಬರ ಹತ್ತಿರ ಮತ್ತೊಬ್ಬರು ಇರುತ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಡಿಮೆ ಆಗುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುತ್ತವೆ. ಪರಿಣಾಮ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ ಎಂದು ಡಾ. ಪೌಲ್ ಹೇಳಿದ್ದಾರೆ.
ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ 2-3 ದಿನಗಳ ಮುನ್ನವೇ ಜನರು ವೈರಸ್ ಅನ್ನು ಹರಡಲು ಆರಂಭಿಸುತ್ತಾರೆ. ಕೆಲವು ವೈರಸ್ಗಳು ಅತಿಯಾದ ಉಷ್ಣಾಂಶದಲ್ಲಿ ಸಾಯುತ್ತವೆ ಆದರೆ ಕಡಿಮೆ ಉಷ್ಣಾಂಶದಲ್ಲಿ ಎರಡು ಪಟ್ಟು ಹೆಚ್ಚಾಗುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಗುಂಪು ಗುಂಪಾಗಿ ಓಡಾಡುವುದನ್ನು ನಿಲ್ಲಿಸಿ, ಮಾಸ್ಕ್ ಧರಿಸಿ, ಪದೇಪದೆ ಕೈ ತೊಳೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.