ಸ್ವಾತಂತ್ರ್ಯೋತ್ಸವ ದಿನಾಚರಣೆ ಮತ್ತೆ ಬಂದಿದೆ. ಆದರೆ, 74ರ ಈ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸುವ ಉತ್ಸಾಹವಾಗಲಿ, ವಾತಾವರಣವಾಗಲಿ ದೇಶದಲ್ಲಿ ಕಾಣುತ್ತಿಲ್ಲ.
ವರ್ಷದಿಂದ ವರ್ಷಕ್ಕೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತಿದೆ ನಿಜ! ಆದರೆ, ಕೊರೊನಾ ಭೀಕರ ಮಾರಿಯ ಸಾಂಕ್ರಾಮಿಕ ಹರಡುವಿಕೆ ವಿಶ್ವದಾದ್ಯಂತ ವ್ಯಾಪಿಸಿರುವುದರ ಜೊತೆಗೆ, ಭಾರತ ಸ್ವಾತಂತ್ರ್ಯದ ಕನಸನ್ನು ಮುಂದಿನ ಭವಿಷ್ಯವನ್ನು ಕಾಣುವ ಅವಕಾಶವನ್ನು ದೇಶವಾಸಿಗಳಿಂದ ಕಸಿದುಕೊಂಡಿದೆ.
ಯುವ ಜನರ ಬದುಕನ್ನು ಮಂಕಾಗಿಸಿ, ಉತ್ಸಾಹದ ಬಾವುಟ ಹಾರಿಸಲಾಗದ ಮನಸ್ಥಿತಿಗೆ ದೂಡಿದೆ !. ಎಂದಿನಂತೆ ಓದಿಕೊಂಡ ಸಂಕಲ್ಪ, ಧ್ಯೇಯ ಭಾಷಣಗಳನ್ನು ಉರುಹೊಡೆದ ಜನಪ್ರತಿನಿಧಿಗಳು ತಾಲೂಕು, ಜಿಲ್ಲಾ ಮಟ್ಟದಲ್ಲಿ ನೆಟ್ಟ ಧ್ವಜ ಕಂಬಗಳಿಗೆ ಒಪ್ಪಿಸಿ ಬರುತ್ತಾರೆ. ಸಿಹಿಗಾಗಿ ಕಾತರಿಸುವ ಮಕ್ಕಳ ಬಾಯಿಗೆ ಅವಕಾಶವಿಲ್ಲದಂತೆ ಶಾಲೆಗಳಿಗೆ ಬೀಗ ಜಡಿದಿದೆ.
ಸಾಂಸ್ಕೃತಿಕ ಬದುಕಿನ ಮಹತ್ವ ಮಾಯ
ಹಾರುವ ಬಾನಾಡಿ ಭ್ರಮನಿರಸನ ಮೂಡಿ ಕಾಣದಾಗಿದೆ. ಸಾಂಸ್ಕೃತಿಕ ಬದುಕಿನ ಮಹತ್ವ ಮಾಯವಾಗಿದೆ ! ಇನ್ನೊಂದೆಡೆ ಭಾರತೀಯರಾಗಿ ಸಂತೋಷಪಡಬೇಕಾದ ನಾವು ಸಂಶಯ ಪಡುವ ವಾತಾವರಣ ನಿರ್ಮಿಸಿಕೊಂಡಿದ್ದೇವೆ. ಒಬ್ಬರನ್ನೊಬ್ಬರೂ ನಂಬಲಾರದ ಅಸಹಾಯಕ ಭಾವ ಸೃಷ್ಟಿಸಿಕೊಂಡಿದ್ದೇವೆ.
ನಾಡನ್ನು ಬಾಧಿಸತೊಡಗಿವೆ ತಂಟೆಗಳು
ನಮ್ಮ ಕನ್ನಡ ನಾಡನ್ನು ಭಾಷೆ-ಗಡಿ ನದಿನೀರಿನ ತಂಟೆಗಳು ಬಾಧಿಸತೊಡಗಿ, ದ್ವೇಷ ಮಾಡುವಂತಹ ನೆಪಗಳು ಬೇಕಾದಷ್ಟು ಹೆಚ್ಚಿದೆ !. ಕಾಶ್ಮೀರ, ರಾಮಮಂದಿರಗಳಂತಹ ಸಮಸ್ಯೆಗಳಿಗೆ ದೇಶವು ತಾರ್ಕಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ ಯಾದರೂ ಹೊಸ ಹೊಸ ಒಡಕುಗಳು ಉಂಟಾಗಿ, ಮಂಗಳೂರು, ಬೆಂಗಳೂರುಗಳಲ್ಲಿ ಗಲಭೆಗಳು ಜರುಗಿ ಸಮಾಜವನ್ನು ರಕ್ಷಿಸುವ ಆರಕ್ಷಕರೆ ಹಲ್ಲೆಗೊಳಗಾಗಿ ಸುರಕ್ಷೆಯ ಸ್ಥಿತಿ ಕಾಣದಾಗಿದೆ !
ಮಹತ್ವಾಕಾಂಕ್ಷೆಗಳು ನುಚ್ಚುನೂರು
ಒಳಗಿನಿಂದಲೂ ಅಪಾಯ ಹೊರಗಿನಿಂದಲೂ ಅಪಾಯದ ಕಾರಣ ಜನಕ್ಕೆ ಅಸಹಾಯಕ ಭಾವ ಎದ್ದು ಕಾಣುತ್ತಿದೆ !. ಇದು ನಮ್ಮ ಹಿರಿಯರಿಂದ ನಾವು ಕೇಳಿ ತಿಳಿದ ಸ್ವಾತಂತ್ರ್ಯದ ಫಲವೇ? ತ್ಯಾಗ-ಬಲಿದಾನದ ಸ್ವಾತಂತ್ರ್ಯವೇ? ಇದಕ್ಕೆ ಉತ್ತರದಾಯಿತ್ವ ಇಲ್ಲದೇ ಹೋದರೆ ಸ್ವಾತಂತ್ರ್ಯ ಆಚರಣೆಗೆ ನಾವು ಅರ್ಹರೇ? ಮುಂದಿನ ಪೀಳಿಗೆಗೆ ನಾವು ಮಾದರಿ ಆಗಬಲ್ಲವು ಹೇಗೆ? ಕೊರೊನಾದ ಈ ಹೊತ್ತಲ್ಲಿ ಮಹತ್ವಾಕಾಂಕ್ಷೆಗಳು ನುಚ್ಚುನೂರಾಗಿ ಎಲ್ಲೆಲ್ಲೂ ಹತಾಶೆ ಕಾಣುತ್ತಿದೆ. ಇನ್ನೊದೆಡೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು, ಕೋಟ್ಯಂತರ ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ. ಸಾವಿರಾರು ಕಾರ್ಖಾನೆಗಳು ಶಾಶ್ವತವಾಗಿ ಬೀಗ ಜಡಿಸಿಕೊಳ್ಳುತ್ತಿವೆ. ಇದರತ್ತವು ನಮ್ಮ ರಾಜಕೀಯ ನಾಯಕರು ಅದರಲ್ಲೂ ಆಡಳಿತ ನಡೆಸುತ್ತಿರುವ ಮುತ್ಸದ್ದಿಗಳು ಈ ಬಗ್ಗೆ ಅತ್ಯಂತ ಜಾಗರೂಕರಾಗಬೇಕಾದ ಅಗತ್ಯತೆ ಇಂದು ತೀವ್ರವಾಗಿದೆ.
ವೈಷಮ್ಯ ಕಡಿಮೆಯಾದಾಗ ಆಚರಣೆಗೆ ಹೊಸ ರಂಗು
ರಾಜಕೀಯ ಚದುರಂಗದಾಟದ ಅಟ್ಟಹಾಸದಲ್ಲಿ, ಮತ ಬೇಟೆಯಲ್ಲಿ, ಸಂಖ್ಯಾಧಾರಿತ ಅಧಿಕಾರದ ಮದೋನ್ಮತ್ತ ಉದ್ರೇಕದಲ್ಲಿ ದೇಶದ ಕಾಳಜಿ ಯಾರಿಗಿದೆ?.. ಈ ಹಿನ್ನೆಲೆಯಲ್ಲಿ ಪ್ರತಿ ಸಮಸ್ಯೆಯನ್ನು ಹೊಸದೃಷ್ಟಿಯಿಂದ ನೋಡಬಹುದಾಗಿದೆ. ಪರಸ್ಪರ ವಿಶ್ವಾಸ ಮೂಡಿಸುವ ತಿಳಿವಳಿಕೆ ಮಾಡಿಕೊಳ್ಳುವ ಅಗತ್ಯ ಪ್ರಯತ್ನ ಆಗಬೇಕಾಗಿದೆ. ಪ್ರೀತಿ-ವಿಶ್ವಾಸಗಳಿಂದ ಭಾರತೀಯ ಬಾಂಧವರ ನಡುವಿನ ವೈಷಮ್ಯ ಕಡಿಮೆಯಾದಾಗ ಸ್ವಾತಂತ್ರ್ಯ ಆಚರಣೆಗೆ ಹೊಸ ರಂಗು ಬಂದಿತು, ನವ ಅರ್ಥ ತಂದಿತೂ…
ಲೇಖಕರು:
l ಆರ್. ವೆಂಕಟರಾಜು, ಮಾಜಿ ಸದಸ್ಯರು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು
Super sir all the best