ಬೆಂಗಳೂರು: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ವೊಂದನ್ನು ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಪ್ರಕಟಿಸಲಾಗಿದೆ ಎಂದು ಆರೋಪಿಸಿದ 500ಕ್ಕೂ ಹೆಚ್ಚು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿ ಶಾಸಕರ ಮನೆಗೆ ಹಾನಿ ಮಾಡಲೆಂದೆ ಕೆಲವರು ದುಷ್ಕರ್ಮಿಗಳಿಗೆ ಹಣ ಹಂಚಿದ್ದಾರೆ ಎಂಬುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಪೊಲೀಸರು ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಇದರಲ್ಲಿ ಇರುವ ದೃಷ್ಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ರಸ್ತೆಯಲ್ಲಿ ಹಾಗೂ ಠಾಣೆ ಎದುರೇ ವಾಹನಗಳು ಹೊತ್ತಿ ಉರಿದವು. ಕೈಯಲ್ಲಿ ಕಟ್ಟಿಗೆ ಹಾಗೂ ಕಲ್ಲು ಹಿಡಿದಿದ್ದ ನೂರಾರು ದುಷ್ಕರ್ಮಿಗಳು, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಕಿಟಕಿ ಗಾಜುಗಳನ್ನು ಒಡೆದರು.
ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ಮಾಡಿದ್ದ ಕಿಡಿಗೇಡಿಗಳು, ವಿದ್ಯುತ್ ದೀಪ ಹಾಗೂ ಗಾಜುಗಳನ್ನು ಒಡೆದು ಹಾಕಿದರು. ಉದ್ವಿಗ್ನಗೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.