ಬೆಂಗಳೂರು: ಡ್ರಗ್ಸ್ ನಶೆಯ ಮತ್ತು ಬಗೆದಷ್ಟು ಆಳವಾಗುತ್ತ ಹೋಗುತ್ತಿದ್ದು, ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ನೀಡಿದ ಮಾಹಿತಿ ಮೇರೆಗೆ ಇಂದು ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಮುಂಜಾನೆ 6.30 ಸಿಸಿಬಿ ಪೊಲೀಸರು ಇಂದಿರಾನಗರದಲ್ಲಿರುವ ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲೇ ಇದ್ದ ನಟಿಯನ್ನು ವಶಕ್ಕೆ ಪಡೆದರು.
ಬಳಿಕ ಮನೆ, ಕಾರು ಸೇರಿ ಎಲ್ಲವನ್ನು ಪರಿಶೀಲನೆ ಮಾಡಿದರು. ನಂತರ ಅವರನ್ನು ಸುಮಾರು ಮೂರೂವರೆ ಗಂಟೆಗಳ ವರೆಗೆ ತಪಾಸಣೆ ನಡೆಸಿದ ಸಿಸಿಬಿ ಪೊಲೀಸರು 10ಗಂಟೆ ಸುಮಾರಿಗೆ ಅವರನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ತಪಾಸಣೆ ವೇಳೆ ಮಹತ್ವದ ದಾಖಲೆಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ರವಿ ಶಂಕರ್‌ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆದಿದ್ದರು. ಇನ್ನೊಂದೆಡೆ ಪೊಲೀಸರ ಬಲೆಗೆ ಸಂಜನಾ ಗಲ್ರಾನಿ ಆಪ್ತ ರಾಹುಲ್ ಬೀಳುತ್ತಿದ್ದಂತೆ ಸಂಜನಾ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.