ಕೊಡಗು: ಜಿಲ್ಲೆಯಲ್ಲಿ ಶುರುವಾಗಿರುವ ಭಾರಿ ಮಳೆಗೆ ಬೆಟ್ಟ ಗುಟ್ಟಗಳು ಕುಸಿಯುತ್ತಿವೆ. ಜತೆಗೆ ಮನೆಗಳು ಗುಡ್ಡ ಕುಸಿತದಿಂದ ಕಾಣೆಯಾಗುತ್ತಿವೆ.
ಕಾವೇರಿ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ನಾಪತ್ತೆಯಾಗಿದ್ದಾರೆ.
ತಲಕಾವೇರಿ ಪುಣ್ಯ ಕ್ಷೇತ್ರ ಬಳಿಯಲ್ಲಿ ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿಹೋಗಿವೆ. ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡ ಕಾರ್ಯಾಚರಣೆ ನಡೆಸುತ್ತಿದೆ.
ಸುಮಾರು 6 ಕಿ.ಮೀ. ಉದ್ದಕ್ಕೆ ಬೆಟ್ಟದ ಸಾಲು ಕುಸಿದು, ಸಂಭವಿಸಿದ ಈ ದುರಂತದಲ್ಲಿ ಎರಡು ಕಾರು, 20 ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ.
7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಇನ್ನು ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಮಳೆಯ ಮುನ್ನೆಚ್ಚರಿಕೆಯ ಭಾಗವಾಗಿ ರೆಡ್ ಅಲರ್ಟ್ ಘೋಷಿಲಾಗಿದೆ.
ಜಿಲ್ಲೆಯಲ್ಲಿ ನದಿ, ಕೆರೆ ದಂಡೆಯಲ್ಲಿರುವವರು ಜಾಗರೂಕರಾಗಿರಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನದಿ ಅಥವಾ ಕೆರೆಗಳ ಸಮೀಪ ತೆರಳಬಾರದು. ಅತಿವೃಷ್ಟಿ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಮಂಗನಕೊಪ್ಪದಲ್ಲಿ ಭಾರಿ ಮಳೆಗೆ ಮನೆ ಕುಸಿದಿದೆ. ಮತ್ತೊಂದು ಕಳೆ ಬೆಳೆಗಳು ಕೊಚ್ಚಿಹೋಗಿವೆ. ಖಾನಪುರ ತಾಲೂಕಿನಲ್ಲಿ ಮಲಪ್ರಭ ಮತ್ತು ಪಾಂಡ್ರಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ದಂಡೆ ಮೇಲೆ ವಾಸಿಸುತ್ತಿರುವವರು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಗೊಳ್ಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡದ್ದಾರೆ.
ಮೈದುಂಬಿ ಹರಿಯುತ್ತಿರುವ ನೇತ್ರಾವತಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ಮತ್ತು ಕುಮಾರಧಾನ ನದಿಗಳು ಮೈದುಂಬಿ ಹರಿಯುತ್ತಿವೆ. ಹೀಗಾಗಿ ನೇತ್ರಾವತಿಯಲ್ಲಿ ಮಿಂದೇಳುವ ಮೂಲಕ ಭಕ್ತರು ಪಾಪ ಕರ್ಮಗಳನ್ನು ಕಳೆದು ಕೊಳ್ಳವ ಶ್ರೀ ಕ್ಷೇತ್ರ ಧರ್ಮಸ್ಥಳದ ಪುಣ್ಯ ಸ್ನಾನ ಕ್ಷೇತ್ರದ ಬಳಿ ಭಾರಿ ನೀರು ಹರಿಯುತ್ತಿರುವುದರಿಂದ ಭಕ್ತರನ್ನು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ.