ಕೋಲಾರ: ವಿವಾದದ ಜಮೀನಿಗೆ ಸರ್ವೇ ಮಾಡಿ ಎಲ್ಲೆ ಗುರುರತಿಸಿ ಕಲ್ಲು ಊಳಿಸಲು ಹೋಗಿದ್ದ ತಹಸೀಲ್ದಾರ್‌ಗೆ ನಿವೃತ್ತ ಶಿಕ್ಷಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಂಗಾರಪೇಟೆಯ ಕಳವಂಚಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ್ ಅವರೆ ನಿವೃತ್ತ ಶಿಕ್ಷಕ ವೆಂಕಟಪತಿ ಚಾಕುವಿ ಇರಿತಕ್ಕೆ ಬಲಿಯಾದವರು. ಚಾಕುವಿನ ಇರಿತದಿಂದ ನಿತ್ರಾಣಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಷ್ಟರಲ್ಲೇ ಕೊನೆಯುಸಿರೆಳಿದಿದ್ದರು.
ಘಟನೆ ವಿವರ: ರಾಮಮೂರ್ತಿ ಹಾಗೂ ಆರೋಪಿ ವೆಂಕಟಪತಿ ಎಂಬುವರ ನಡುವೆ ಜಮೀನು ವ್ಯಾಜ್ಯವಿದ್ದು, ರಾಮಮೂರ್ತಿ ಬಂಗಾರಪೇಟೆ ತಹಸೀಲ್ದಾರ್‌ಗೆ ಇಬ್ಬರ ಜಮೀನನ್ನು ಹದ್ದುಬಸ್ತು ಗುರುತಿಸಲು ಮನವಿ ಮಾಡಿದ್ದರು. ಅವರ ಮನವಿಯನ್ನು ಆಧರಿಸಿ ಗುರುವಾರ ತಹಸೀಲ್ದಾರ್ ಚಂದ್ರಮೌಳೇಶ್ವರ್, ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆ ಜತೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಸರ್ವೇ ನಡೆಸಿದ ಅವರು ವೆಂಕಟಪತಿ ಜಮೀನಿನಲ್ಲಿ ಕಲ್ಲು ಹಾಕಿಸಿದ್ದರು. ಇದಕ್ಕೆ ಕೋಪಗೊಂಡ ವೆಂಕಟಪತಿ ಏಕಾಏಕಿ ತಹಸೀಲ್ದಾರ್ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ತಹಸೀಲ್ದಾರ್‌ಗೆ ತೀವ್ರ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು.
ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಲೆ ಮರೆಸಿಕೊಂಡಿರುವ ವೆಂಕಟಪತಿ ಅವರ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಚಂದ್ರಮೌಳೇಶ್ವರ ಅವರ ಸಾವಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೊರೊನಾ ಕೊರೊನಾವಿರುದ್ಧ ಹೋರಾಟದಲ್ಲಿ ಚಂದ್ರಮೌಳೇಶ್ವರ್ ರಾತ್ರಿ ಹಗಲು ಎನ್ನದೆ ದುಡಿದಿದ್ದಾರೆ. ತಾಲೂಕಿನಲ್ಲಿ ಒಳ್ಳೆ ಹೆಸರು ಮಾಡಿ, ಜನರ ವಿಶ್ವಾಸ ಗೆದ್ದಿದ್ದರು. ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.